Tuesday, 20th August 2019

ಕಂಡಕ್ಟರ್‌ನಿಂದ ಬಸ್ಸಲ್ಲೇ ಗಾನಾ ಬಜಾನ – ಯಾದಗಿರಿಯ ಪರಶುರಾಮ್ ಪಬ್ಲಿಕ್ ಹೀರೋ

ಯಾದಗಿರಿ: ಕುರಿಗಾಯಿ ಹನುಮಂತ ಆಯಿತು, ಕೊಪ್ಪಳದ ಗಂಗಮ್ಮ ಆಯಿತು. ಈಗ ಇವರ ಸಾಲಿಗೆ ಮತ್ತೊಂದು ಗಾನ ಕೋಗಿಲೆ ಸೇರಿಕೊಂಡಿದೆ. ಸರ್ಕಾರಿ ನೌಕರಿ ಮಾಡುತ್ತಲೇ, ಸಂಗೀತ ಸರಸ್ವತಿಯ ಸೇವೆ ಮಾಡುತ್ತಾ ಯಾದಗಿರಿಯ ಬಸ್ ಕಂಡಕ್ಟರ್ ಪರಶುರಾಮ್ ಪಬ್ಲಿಕ್ ಹೀರೋ ಆಗಿದ್ದಾರೆ.

ಹೌದು. ಯಾದಗಿರಿ- ಕಲಬುರಗಿ ಮಧ್ಯೆ ಸಂಚರಿಸುತ್ತಿರುವ ಈಶಾನ್ಯ ಸಾರಿಗೆ ಬಸ್ ಹತ್ತಿದರೆ ನಿಮಗೆ ಫುಲ್ ಎಂಟರ್‌ಟೈನ್‌ಮೆಂಟ್ ಸಿಗೋದು ಗ್ಯಾರಂಟಿ. ಯಾಕಂದ್ರೆ ಬಸ್‍ನ ಕಂಡಕ್ಟರ್ ಕಂಠದಿಂದ ಹೊರಹೊಮ್ಮುವ ಹಾಡುಗಳು ಎಲ್ಲರ ಮನಸೋರೆಗೊಳ್ಳುತ್ತವೆ. ಬಸ್ಸಲ್ಲೇ ಕರೋಕೆ ಮ್ಯೂಸಿಕ್ ಹಾಕಿಕೊಂಡು ಕೈಯಲ್ಲಿ ಮೈಕ್ ಹಿಡ್ಕೊಂಡು ಹಾಡೋಕೆ ಶುರು ಮಾಡ್ತಾರೆ.

ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರಿನವರಾದ ಪರಶುರಾಮ್, ಕಳೆದ ಎಂಟು ವರ್ಷದಿಂದ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪರಶುರಾಮ್‍ಗೆ ಶಾಲಾ ದಿನಗಳಿಂದಲೂ ಹಾಡು ಹೇಳೋ ಹುಚ್ಚು. ಹೀಗಾಗಿ ಇದೀಗ ಇಲಾಖೆಯ ಅನುಮತಿ ಪಡೆದು ಬಸ್ಸಲ್ಲೂ ಗಾಯನ ಮುಂದುವರಿಸಿದ್ದಾರೆ.

ಅಂದ ಹಾಗೇ ಪರಶುರಾಮ್ ಎಲ್ಲೂ ಹೋಗಿ ಸಂಗೀತ ಕಲಿತಿಲ್ಲ. ಆದರೂ ಶೃತಿ, ರಾಗ, ಲಯ ತಪ್ಪದಂತೆ ಹಾಡಿ ನಿತ್ಯ ನೂರಾರು ಪ್ರಯಾಣಿಕರನ್ನು ರಂಜಿಸುತ್ತಾರೆ. ಈ ಮೂಲಕ ಅಭಿಮಾನಿಗಳನ್ನೂ ಗಳಿಸಿಕೊಂಡಿದ್ದಾರೆ. ಈ ಭಾಗದಲ್ಲಿ ನಿತ್ಯ ಸಂಚರಿಸೋ ಸರಕಾರಿ ನೌಕರರು, ವಿದ್ಯಾರ್ಥಿಗಳು ತಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಲು ಈ ಬಸ್ ಹತ್ತುವುದಾಗಿ ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಒಟ್ಟಿನಲ್ಲಿ ಪರಶುರಾಮ್ ತನ್ನ ಗಾಯನದ ಮೂಲಕ ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಿದ್ದಾರೆ. ವೃತ್ತಿಯ ಜೊತೆಗೆ ತನ್ನ ಹವ್ಯಾಸ ಮುಂದುವರಿಸುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *