Thursday, 20th June 2019

Recent News

ಮರ, ಗಿಡ ಬೆಳೆಸೋದಂದ್ರೆ ಪಂಚಪ್ರಾಣ – ಸೈಕಲ್‍ನಲ್ಲಿ ನೀರು ಹೊತ್ತು ಬೆಟ್ಟ ಏರ್ತಾರೆ ಚಿಕ್ಕಬಳ್ಳಾಪುರದ ಬ್ರಹ್ಮ ಚೈತನ್ಯ

ಚಿಕ್ಕಬಳ್ಳಾಪುರ: ಇವತ್ತಿನ ನಮ್ಮ ಪಬ್ಲಿಕ್ ಹೀರೋ ತುಂಬಾ ಡಿಫರೆಂಟ್. ತಮ್ಮ ಇಳಿ ವಯಸ್ಸಿನಲ್ಲಿಯೀ ಕಡಿದಾದ ಬೆಟ್ಟವನ್ನೇರಿ ಮರ-ಗಿಡಗಳಿಗೆ ನೀರುಣಿಸಿ, ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ಪಾಲನೆ ಪೋಷಣೆ ಮಾಡ್ತಿದ್ದಾರೆ.

ಜಿಲ್ಲೆಯ ಚಿಂತಾಮಣಿ ಪಟ್ಟಣದ ನಿವಾಸಿ 73 ವರ್ಷದ ಬ್ರಹ್ಮ ಚೈತನ್ಯ ಅವರು ನಮ್ಮ ಪಬ್ಲಿಕ್ ಹೀರೋ. ಪ್ಲಾಸ್ಟಿಕ್ ಕ್ಯಾನ್‍ಗಳಲ್ಲಿ ನೀರು ತುಂಬಿಕೊಂಡು, ಸೈಕಲ್ ತಳ್ಳಿಕೊಂಡು ತೀರ ಕಡಿದಾದ ಬೆಟ್ಟಗಳ ಸಾಗಿ ಮರಗಳಿಗೆ ನೀರುಣಿಸುತ್ತಿದ್ದಾರೆ.

ಬೆಳಗ್ಗೆ ಎದ್ದರೆ ಕ್ಯಾನ್‍ಗಳಲ್ಲಿ ನೀರು ತುಂಬಿಕೊಂಡು ಕಾಡುಮಲ್ಲೇಶ್ವರ ಬೆಟ್ಟದ ತಪ್ಪಿನಲ್ಲಿರುವ ಮರಗಿಡಗಳ ಪೋಷಣೆಗೆ ಹೊರಡ್ತಾರೆ. ಕೃಷಿ ಇಲಾಖೆ ಸೇವೆಯಿಂದ ನಿವೃತ್ತರಾಗಿರೋ ಇವರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಅಲ್ಲಿ ಎಲ್ಲ ಬಾದಾಮಿ, ಮಾವು, ನೇರಳೆ, ಗಸಗಸೆ, ಹುಣಸೆ ಹೀಗೆ 30 ಕ್ಕೂ ಹೆಚ್ಚು ಗಿಡಗಳನ್ನ ನೆಟ್ಟು ಬೆಳೆಸಿರುವುದು ವಿಶೇಷ.

ಮೊದಲು ಬೆನ್ನಿಗೆ ನೀರು ತುಂಬಿದ ಕ್ಯಾನ್ ಕಟ್ಟಿಕೊಂಡು ಬೆಟ್ಟ ಏರುತ್ತಿದ್ದರು. ಇವರ ಕಷ್ಟ ಕಂಡ ಒಬ್ಬರು ಹಳೆಯ ಸೈಕಲ್ ದಾನ ಮಾಡಿದ್ದಾರೆ. ಹೀಗಾಗಿ ಸದ್ಯ ಪರಿಚಯಸ್ಥರ ಮನೆಯ ಸಂಪಿನಲ್ಲಿ ನೀರು ತುಂಬಿಕೊಂಡು, ಸೈಕಲ್‍ನಲ್ಲಿ ನೀರು ಕೊಂಡೊಯ್ತಿದ್ದಾರೆ. ಬಿಪಿ, ಶೂಗರ್ ಇದ್ರೂ ಆರೋಗ್ಯಕ್ಕಿಂತ ಮರಗಿಡಗಳ ಪೋಷಣೆಯಲ್ಲೇ ನೆಮ್ಮದಿ ಕಾಣ್ತಾರೆ.

ಬ್ರಹ್ಮಚೈತನ್ಯರಿಗೆ ಎರಡು ಹೆಣ್ಣು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಎಲ್ಲರೂ ಮದುವೆ ಮಾಡಿಕೊಂಡು ಆರಾಮಾಗಿದ್ದಾರೆ. ಮಕ್ಕಳು ಮೊಮ್ಮಕ್ಕಳ ಜೊತೆ ಹಾಯಾಗಿ ಇರಬೇಕಾದ ಈ ವಯಸ್ಸಲ್ಲಿ ಮರ ಗಿಡ ಬೆಳೆಸಿ ಪರಿಸರ ಪ್ರೇಮವನ್ನು ಎಲ್ಲರಿಗೂ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *