Wednesday, 17th July 2019

ಉಂಗುರ ಬದಲಿಸಿಕೊಂಡ ಪ್ರಿಯಾಂಕ ಚೋಪ್ರಾ-ನಿಕ್ ಜೋನ್ಸ್

ಮುಂಬೈ: ಬಾಲಿವುಡ್ ನ ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಮತ್ತು ಅಮೆರಿಕಾದ ಗಾಯಕ ನಿಕ್ ಜೋನ್ಸ್ ಜೊತೆ ಇಂದು ಉಂಗುರ ಬದಲಿಸಿಕೊಂಡಿದ್ದಾರೆ.

ಪ್ರಿಯಾಂಕರ ಮುಂಬೈನ ನಿವಾಸದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಇಂದು ನಡೆದಿದೆ. ಭಾರತೀಯ ಸಂಪ್ರದಾಯದಂತೆ ನಡೆದ ಕಾರ್ಯಕ್ರಮದಲ್ಲಿ ಪ್ರಿಯಾಂಕ ಹಳದಿ ಬಣ್ಣದ ಡ್ರೆಸ್ ಧರಿಸಿ ಮಿಂಚಿದ್ರೆ, ನಿಕ್ ಶ್ವೇತ ವರ್ಣದ ಕುರ್ತಾದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ತುಂಬಾ ಖಾಸಗಿಯಾಗಿ ನಡೆದ ಸಮಾರಂಭದಲ್ಲಿ ಕೇವಲ ಆಪ್ತ ಬಂಧುಗಳು ಹಾಗು ಸ್ನೇಹಿತರು ಭಾಗಿಯಾಗಿದ್ದರು ಎಂದು ಮಾಧ್ಯಮಗಳು ಪ್ರಕಟಿಸಿವೆ.

ಕಳೆದ 6 ತಿಂಗಳನಿಂದ ಪ್ರಿಯಾಂಕ ಮತ್ತು ನಿಕ್ ಜೊತೆ ಜೊತೆಯಾಗಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಮಾಧ್ಯಮಗಳು ಈ ಕುರಿತು ಪ್ರಶ್ನಿಸಿದಾಗ ಇಬ್ಬರು ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದರು. ಇಂದು ಅಧಿಕೃತವಾಗಿ ವಿವಾಹದ ಮೊದಲ ಹೆಜ್ಜೆಯನ್ನ ಇರಿಸಿದ್ದಾರೆ. ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನೆಚ್ಚಿನ ನಟಿಗೆ ಶುಭಕೋರುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಅಮೆರಿಕಾದ ಗಾಯಕ ನಿಕ್ ಜೋನ್ಸ್ ಜೊತೆ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕ ಎಲ್ಲಿಯೂ ತಮ್ಮ ಸಂಬಂಧದ ಬಗ್ಗೆ ಹೇಳಿಕೊಂಡಿರಲ್ಲ. ಆದರೆ ತಮ್ಮ ಇಬ್ಬರು ಒಬ್ಬರನ್ನೊಬ್ಬರನ್ನು ಪ್ರೀತಿಸುತ್ತಿದ್ದಾರೆ ಎಂಬುವುದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿತ್ತು. ಇದೇ ವರ್ಷ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಪ್ರಿಯಾಂಕ ಮತ್ತು ನಿಕ್ ಮದುವೆ ಆಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿತ್ತು.

ಸೆಪ್ಟೆಂಬರ್ 16ರಂದು ನಿಕ್ ಹುಟ್ಟು ಹಬ್ಬದ ದಿನದಂದೇ ಇಬ್ಬರು ತಾರೆಯರು ವೈವಾಹಿಕ ಬಂಧನಕ್ಕೆ ಒಳಗಾಗಲಿದ್ದಾರೆ ಎಂಬ ಮತ್ತೊಂದು ಸುದ್ದಿ ಸದ್ಯ ಚಾಲ್ತಿಯಲ್ಲಿದೆ. ತನಗಿಂತ 10 ವರ್ಷ ಚಿಕ್ಕವನಾದ ನಿಕ್‍ರನ್ನು ಪ್ರಿಯಾಂಕ ಮದುವೆ ಆಗತ್ತಾರೆ ಎಂಬ ಪ್ರಶ್ನೆಯೊಂದು ಅಭಿಮಾನಿಗಳಲ್ಲಿ ಮೂಡಿದೆ. ಇತ್ತ ಮದುವೆ ಕೆಲಸಗಳಲ್ಲಿ ಬ್ಯೂಸಿಯಾದ ಕಾರಣವೇ ಸಲ್ಮಾನ್ ನಟಿಸುತ್ತಿರುವ `ಭಾರತ್’ ಸಿನಿಮಾದಿಂದ ಪ್ರಿಯಾಂಕ ಹೊರ ಬಂದಿದ್ದಾರೆ.

ಆಗಸ್ಟ್ ಮೊದಲ ವಾರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ದೆಹಲಿಗೆ ಬಂದಿಳಿದ ಪ್ರಿಯಾಂಕ ವಿಮಾನ ನಿಲ್ದಾಣದ ಹೊರಗಡೆ ಮಾಧ್ಯಮಗಳನ್ನು ಕಂಡ ಕೂಡಲೇ ಬೆರಳಲ್ಲಿರುವ ಉಂಗುರವನ್ನು ಮರೆ ಮಾಡಿ ಜೇಬಿನಲ್ಲಿ ಇರಿಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಅಭಿಮಾನಿಯೊಬ್ಬರ ಮೊಬೈಲ್ ನಲ್ಲಿ ಎಲ್ಲ ದೃಶ್ಯಗಳು ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಈ ಹಿಂದೆ ಸಂದರ್ಶನ ಒಂದರಲ್ಲಿ ನನ್ನ ಬೆರಳಲ್ಲಿ ಎಲ್ಲಿಯವರೆಗೂ ಉಂಗುರ ಇರೋದಿಲ್ಲವೋ ಅಂದಿನವರೆಗೆ ನಾನು ಸಿಂಗಲ್ ಎಂದರ್ಥ ಎಂದಿದ್ದ ಪ್ರಿಯಾಂಕ ಈಗ ಉಂಗರವನ್ನು ಮೆರೆ ಮಾಚಿದ್ದು ಯಾಕೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *