Sunday, 18th August 2019

Recent News

ಕಾರವಾರ ಬಸ್ ನಿಲ್ದಾಣದಲ್ಲಿ ಓವರ್‍ ಟೇಕ್ ಗಲಾಟೆ: KSRTC ಚಾಲಕನಿಗೆ ಖಾಸಗಿ ಬಸ್ ಸಿಬ್ಬಂದಿಯಿಂದ ಥಳಿತ

ಕಾರವಾರ: ಓವರ್‍ಟೇಕ್ ಮಾಡಿದ್ದನ್ನ ಪ್ರಶ್ನಿಸಿದ್ದ ಕೆಎಸ್‍ಆರ್‍ಟಿಸಿ ಬಸ್ ಚಾಲಕರಿಗೆ ಖಾಸಗಿ ಬಸ್ ಚಾಲಕ ಹಾಗೂ ಏಜೆಂಟ್ ಥಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಚಂದ್ರಹಾಸ್ ಬೀಸನಳ್ಳಿ ಹಾಗೂ ಏಕನಾಥ್ ಎಂಬವರು ಹಲ್ಲೆಗೊಳಗಾದ ಬಸ್ ಚಾಲಕರು. ಚಂದ್ರಹಾಸ್ ಮತ್ತು ಏಕನಾಥ್ ಇಬ್ಬರೂ ಅತಿ ವೇಗವಾಗಿ ಬಸ್ ಚಾಲನೆ ಮಾಡುತ್ತಿದ್ದ ಸುಗಮ ಟೂರಿಸ್ಟ್ ಬಸ್ ಸಂಸ್ಥೆಯ ವಾಹನ ಚಾಲಕರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಕಚೇರಿಯ ಒಳಗೆ ಕರೆದುಕೊಂಡು ಹೋಗಿ ಕಚೇರಿಯ ಏಜೆಂಟ್ ಸಂತೋಷ್ ಶೆಟ್ಟಿ ಹಾಗೂ ಆತನ ಸಹಚರರು ಸೇರಿ ಹಲ್ಲೆ ನೆಡೆಸಿದ್ದಾರೆ.

ಆಗಿದ್ದೇನು?: ಇಂದು ಬೆಳಗ್ಗೆ ಕೆಎಸ್‍ಆರ್‍ಟಿಸಿ ನಗರ ಸಾರಿಗೆ ಬಸ್ ಮುದಗಾ ದಿಂದ ಕಾರವಾರಕ್ಕೆ ಬರುತ್ತಿರುವಾಗ ಬಿಣಗಾ ಗ್ರಾಮದ ಬಳಿ ಬೆಂಗಳೂರಿನಿಂದ ಕಾರವಾರಕ್ಕೆ ಬರುತಿದ್ದ ಸುಗಮ ಟ್ರಾವೆಲ್ಸ್ ಅತೀ ವೇಗದಿಂದ ಸರ್ಕಾರಿ ಬಸ್ ಅನ್ನು ಓವರ್ ಟೇಕ್ ಮಾಡಿತ್ತು. ಇದರಿಂದಾಗಿ ಸರ್ಕಾರಿ ಬಸ್ ಅಪಘಾತವಾಗುವುದರಲ್ಲಿತ್ತು. ಹೀಗಾಗಿ ನಿಲ್ದಾಣಕ್ಕೆ ಬಂದವೇಳೆ ಇದನ್ನು ಸರ್ಕಾರಿ ಬಸ್ ಚಾಲಕರಾದ ಚಂದ್ರಹಾಸ್ ಹಾಗೂ ಏಕನಾಥ್ ಪ್ರಶ್ನಿಸಿದ್ರು. ಇದರಿಂದ ಕೋಪಗೊಂಡ ಖಾಸಗಿ ಬಸ್ ಚಾಲಕರು ಚಂದ್ರಹಾಸ್ ಮತ್ತು ಏಕನಾಥ್‍ರ ಮೇಲೆ ಹಲ್ಲೆ ಮಾಡಿದ್ದಾರೆ.

ಹಲ್ಲೆಗೊಳಗಾದ ಇಬ್ಬರು ಸರ್ಕಾರಿ ಬಸ್ ಚಾಲಕರು ಕಾರವಾರ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸಿಲ್ಲ. ಈ ಕಾರಣದಿಂದ ಸರ್ಕಾರಿ ಬಸ್ ಸಿಬ್ಬಂದಿ ನಗರದ ವಿವಿಧಡೆ ಸಂಚರಿಸುವ ಸರ್ಕಾರಿ ಬಸ್ಸುಗಳನ್ನು ಸ್ಥಗಿತಗೊಳಿಸಿ ಸುಗಮ ಟ್ರಾವೆಲ್ಸ್ ಕಚೇರಿ ಎದುರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲವು ಕಾಲ ನಗರದ ಹೃದಯ ಭಾಗದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ಸಹ ನಿರ್ಮಾಣವಾಗಿತ್ತು.

ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರು ಸುಗಮ ಟ್ರಾವೆಲ್ಸ್ ನ ಸಂತೋಷ್ ಶೆಟ್ಟಿಯನ್ನು ವಶಕ್ಕೆ ಪಡೆದುಕೊಂಡ ನಂತರ ಸಾರಿಗೆ ನೌಕರರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ. ಇನ್ನೂ ಸಂತೋಷ್ ಶೆಟ್ಟಿಯ ಸಹಚರರಾದ ನಾಲ್ವರು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ನಾಪತ್ತೆಯಾಗಿರುವ ನಾಲ್ವರ ಪತ್ತೆಗಾಗಿ ಜಾಲ ಬೀಸಿದ್ದಾರೆ.

 +

 

 

Leave a Reply

Your email address will not be published. Required fields are marked *