Tuesday, 21st January 2020

Recent News

‘ಭಾರತ ಮತ್ತೆ ಗೆದ್ದಿದೆ’ – ‘ಗೋಲ್ಡನ್ ಟ್ವೀಟ್’ ಹೆಗ್ಗಳಿಕೆಗೆ ಪಾತ್ರವಾಯ್ತು ಮೋದಿ ಮಾತು

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುವ ಪ್ರಧಾನಿ ನರೇಂದ್ರ ಮೋದಿ, ಹೆಚ್ಚು ಹಿಂಬಾಲಕರನ್ನು ಹೊಂದಿದ ವಿಶ್ವ ಮಟ್ಟದ ನಾಯಕರ ಪೈಕಿ ಒಬ್ಬರಾಗಿದ್ದಾರೆ. ಇದೀಗ ಅವರ ಒಂದು ಟ್ವೀಟ್ ಸಹ ಅದೇ ರೀತಿ ಹೆಚ್ಚು ವೈರಲ್ ಆಗುವ ಮೂಲಕ ‘ಗೋಲ್ಡನ್ ಟ್ವೀಟ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೇ 23 ರಂದು ಮಧ್ಯಾಹ್ನ 2:42ಕ್ಕೆ ಲೋಕಸಭೆಯ ಚುನಾವಣೆಯ ಫಲಿತಾಂಶದ ನಂತರ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಟ್ವೀಟ್ ಇದೀಗ 2019ರ ‘ಗೋಲ್ಡನ್ ಟ್ವೀಟ್’ ಆಗಿ ಹೊರಹೊಮ್ಮಿದೆ. ಫಲಿತಾಂಶ ಹೊರ ಬೀಳುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರು ವಿಜಯದ ಸಂತಸವನ್ನು ಹಂಚಿಕೊಳ್ಳುವ ಟ್ವೀಟ್ ಮಾಡಿದ್ದರು. ಇದನ್ನು ಅತಿ ಹೆಚ್ಚು ಜನ ರೀಟ್ವೀಟ್ ಹಾಗೂ ಲೈಕ್ ಮಾಡಿದ್ದು, ಈ ಮೂಲಕ ‘ಗೋಲ್ಡನ್ ಟ್ವೀಟ್’ ಎಂದು ಟ್ವಿಟ್ಟರ್ ಇಂಡಿಯಾ ತಿಳಿಸಿದೆ.

2019ನೇ ಸಾಲಿನಲ್ಲಿ ಅತಿ ಹೆಚ್ಚು ರೀಟ್ವೀಟ್ ಆಗಿರುವ ಟ್ವೀಟ್‍ಗಳನ್ನು ಟ್ವಟ್ಟರ್ ಇಂಡಿಯಾ ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಚುನಾವಣೆಯ ಫಲಿತಾಂಶದ ಶುಭ ಹಾರೈಕೆಯ ಟ್ವೀಟ್ ಬರೋಬ್ಬರಿ 4.20 ಲಕ್ಷ ಮೆಚ್ಚುಗೆಗಳನ್ನು ಗಳಿಸಿದ್ದು, 1.17 ಲಕ್ಷ ಬಾರಿ ಇದನ್ನು ರೀಟ್ವೀಟ್ ಮಾಡಲಾಗಿದೆ.

ಅಲ್ಲದೆ #loksabhaelections2019 ಎಂಬ ಹ್ಯಾಶ್ ಟ್ಯಾಗ್ ಹೆಚ್ಚು ಬಳಕೆಯಾಗಿದ್ದು, ನಂತರ #chandrayaan2, #cwc19, #pulwama ಹಾಗೂ #article370 ಹ್ಯಾಶ್ ಟ್ಯಾಗ್‍ಗಳನ್ನು ಹೆಚ್ಚು ಬಳಸಲಾಗಿದೆ.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯರ್ತರಿಗೆ ಹಾಗೂ ದೇಶವಾಸಿಗಳಿಗೆ ಟ್ವೀಟ್ ಮಾಡುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡಿದ್ದರು. ‘ಎಲ್ಲರೂ ಜೊತೆಯಾಗಿ ಬೆಳೆಯೋಣ. ಎಲ್ಲರೂ ಸಮೃದ್ಧಿಯಿಂದ ಇರೋಣ, ಜೊತೆಗೂಡಿ ಸದೃಢ ಹಾಗೂ ಅಂತರ್ಗತ ಭಾರತ ನಿರ್ಮಿಸೋಣ. ಭಾರತ ಮತ್ತೆ ಗೆದ್ದಿದೆ! #ವಿಜಯಭಾರತ್ ಎಂದು ಬರೆದು ಟ್ವೀಟ್ ಮಾಡಿದ್ದರು.

ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಅವರನ್ನು 5.18 ಕೋಟಿ ಜನ ಫಾಲೋ ಮಾಡುತ್ತಿದ್ದು ಮೋದಿ ಅವರು 2,296 ವ್ಯಕ್ತಿಗಳನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.

2019ರ ಲೋಕಸಭಾ ಚುನಾವಣೆ ಭಾರೀ ಕುತೂಹಲ ಹಾಗೂ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಇದರಲ್ಲಿ ಆಡಳಿತಾರೂಢ ಬಿಜೆಪಿ ನೆತೃತ್ವದ ಎನ್‍ಡಿಎನ ಸರ್ಕಾರ ಮರಳಿ ಆಧಿಕಾರಕ್ಕೇರುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಮೇ.23ರಂದು ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿತ್ತು. ಐತಿಹಾಸಿಕ ಗೆಲುವಿನ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರದ ಗದ್ದುಗೆಯನ್ನೇರಿತು. ಬಹುಮತಕ್ಕೆ 272 ಸ್ಥಾನಗಳ ಅಗತ್ಯವಿತ್ತು. ಆದರೆ ಎನ್‍ಡಿಎ ಸರ್ಕಾರ ಒಟ್ಟು 352 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿಯೇ ಏಕಾಂಗಿಯಾಗಿ 303 ಸ್ಥಾನಗಳಲ್ಲಿ ಜಯಗಳಿಸಿತ್ತು.

ಅದ್ಭುತ ಜಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸಹ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದರು. ಈ ವಿಜಯವು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಹಾಗೂ ಅವರ ಮೇಲೆ ಜನತೆ ಇಟ್ಟಿರುವ ನಂಬಿಕೆಯದ್ದಾಗಿದೆ ಎಂದು ಹೇಳಿದ್ದರು.

ಇದು ಭಾರತದ, ರೈತ, ಬಡ ಕುಟುಂಬದ ಯುವಕರ ಆಶಾವಾದದ ವಿಜಯ ಎಂದು ಬಣ್ಣಿಸಿದ್ದರು. ಇದು ಮೋದಿಯವರ ಅಭಿವೃದ್ಧಿ, ಜನರು ಅವರ ಮೇಲೆ ಇಟ್ಟಿರುವ ನಂಬಿಕೆಯ ವಿಜಯವಾಗಿದೆ ಕೋಟ್ಯಂತರ ಬಿಜೆಪಿ ಕಾರ್ಯಕರ್ತರ ಪರವಾಗಿ ನರೇಂದ್ರ ಮೋದಿಯವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದರು.

Leave a Reply

Your email address will not be published. Required fields are marked *