ಮೋದಿ ಸರಳತೆಗೆ ನೆಟ್ಟಿಗರು ಫಿದಾ- ವಿಡಿಯೋ ವೈರಲ್

ಹ್ಯೂಸ್ಟನ್‍: ಪ್ರಧಾನಿ ನರೇಂದ್ರ ಮೋದಿ ಅಮೆರಿಕದಲ್ಲಿ ನಡೆಯುತ್ತಿರುವ ಬಹು ನಿರೀಕ್ಷಿತ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ತೆರಳಿದ್ದು, ಅಲ್ಲಿಯೂ ಸಹ ಸರಳತೆಯ ಮೂಲಕ ಜನರ ಹೃದಯವನ್ನು ಗೆದ್ದಿದ್ದಾರೆ.

ಅಮೆರಿಕದ ಹ್ಯೂಸ್ಟನ್‍ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಮೋದಿಯವರನ್ನು ಸ್ವಾಗತಿಸಲು ಭಾರತೀಯರು ಹಾಗೂ ಯುಎಸ್‍ನ ಗಣ್ಯರು ಆಗಮಿಸಿದ್ದರು. ಸ್ವಾಗತ ಕೋರುವ ವೇಳೆ ಪುಷ್ಪ ಗುಚ್ಛವನ್ನು ನೀಡಿದ್ದಾರೆ. ಈ ವೇಳೆ ಕೆಲ ಹೂವುಗಳು ಕೆಳಗೆ ಬಿದ್ದಿವೆ. ಆಗ ಪ್ರಧಾನಿ ನರೇಂದ್ರ ಮೋದಿ ತಾವೇ ಎತ್ತಿಕೊಂಡು ತಮ್ಮ ಭದ್ರತಾ ಸಿಬ್ಬಂದಿಗೆ ನೀಡುವ ಮೂಲಕ ಸರಳತೆಯನ್ನು ಮೆರೆದಿದ್ದಾರೆ.

ಪ್ರತಿಷ್ಠಿತ ಹೌಡಿ ಮೋದಿ ಕಾರ್ಯಕ್ರಮಕ್ಕೆ ಸ್ವಾಗತಿಸಲು ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ನಿರ್ದೇಶಕ ಕ್ರಿಸ್ಟೋಫರ್ ಓಲ್ಸನ್, ಭಾರತದ ಯುಎಸ್ ರಾಯಭಾರಿ ಕೆನ್ನೆತ್ ಜಸ್ಟರ್ ಮತ್ತು ಅಮೆರಿಕದ ಭಾರತೀಯ ರಾಯಭಾರಿ ಹರ್ಷ್ ವರ್ಧನ್ ಶ್ರೀಂಗ್ಲಾ ಅವರು ಆಗಮಿಸಿ ಪ್ರಧಾನಿ ನರೇಂದ್ರ ಮೋದಿಯವರನ್ನು ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿಮಾನದಿಂದ ಹೊರಗೆ ಬರುತ್ತಿದ್ದಂತೆ ಅಧಿಕಾರಿಗಳತ್ತ ನಡೆದು ಅವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು. ಆಗ ಅವರಿಗೆ ಅಧಿಕಾರಿಗಳು ಹಾಗೂ ಗಣ್ಯರು ಪುಷ್ಪ ಗುಚ್ಛವನ್ನು ನೀಡುತ್ತಾರೆ. ಆಗ ಕೆಲವು ಹೂವುಗಳು ಕಾರ್ಪೆಟ್ ಮೇಲೆ ಬೀಳುತ್ತವೆ. ತಕ್ಷಣವೇ ಅವುಗಳನ್ನು ಎತ್ತಿಕೊಂಡು ಪ್ರಧಾನಿ ಮೋದಿ ತಮ್ಮ ಭದ್ರತಾ ಸಿಬ್ಬಂದಿಗೆ ನೀಡುತ್ತಾರೆ. ಈ ಮೂಲಕ ಸಣ್ಣ ವಿಷಯಗಳಿಗೂ ಪ್ರಧಾನಿ ಮೋದಿ ಗೌರವ ಕೊಡುತ್ತಾರೆ, ಚಿತ್ತ ಹರಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ವಿಡಿಯೋವನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಳಗೆ ಬಿದ್ದ ಹೂವನ್ನು ಸ್ವಯಂ ಪ್ರೇರಿತವಾಗಿ ಮೇಲೆತ್ತಿ ಅದನ್ನು ತಮ್ಮ ಭದ್ರತಾ ಸಿಬ್ಬಂದಿಗೆ ನೀಡುತ್ತಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಸರಳತೆ ಹಾಗೂ ಸೂಕ್ಷ್ಮತೆಯನ್ನು ತೋರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಶುಭವಾಗಲಿ ನರೇಂದ್ರ ಮೋದಿ ಜೀ, ನೀವು ಎಚ್ಚರಿಕೆಯಿಂದ ಗಮಿನಿಸಿದ್ದೀರಿ, ಪುಷ್ಪಗುಚ್ಛದಿಂದ ಬಿದ್ದ ಹೂವನ್ನು ಎತ್ತಿಕೊಂಡಿದ್ದೀರಿ. ಈ ಮೂಲಕ ನೀರು ಸಣ್ಣ ವಿಷಯಗಳನ್ನೂ ಗಮನಿಸುತ್ತೀರಿ, ಅಲ್ಲದೆ ಅದನ್ನು ಎತ್ತಿ ಕೊಡುವ ಮೂಲಕ ಸರಳತೆಯನ್ನು ಮೆರೆದಿದ್ದೀರಿ. ಇದು ಮಹಾನ್ ನಾಯಕನ ಸರಳತೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿಯವರು ಒಂದು ವಾರದವರೆಗೆ ಅಮೆರಿಕ ಪ್ರವಾಸಕ್ಕೆ ತೆರಳಿದ್ದು, ಎರಡನೇ ಬಾರಿ ಗೆದ್ದ ನಂತರ ಇದು ಮೊದಲ ಭೇಟಿಯಾಗಿದೆ. ಇಂದು ಸಂಜೆ ಹ್ಯೂಸ್ಟನ್‍ನಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುತ್ತಿರುವ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮೋದಿ ವೇದಿಕೆ ಹಂಚಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *