Connect with us

Latest

ಪ್ರಧಾನಿಯಾಗಿ ಮತ್ತೊಂದು ದಾಖಲೆ ನಿರ್ಮಿಸಿದ ಮೋದಿ

Published

on

– ಅಟಲ್ ಬಿಹಾರಿ ವಾಜಪೇಯಿಯನ್ನು ಹಿಂದಿಕ್ಕಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ವೃತ್ತಿಜೀವನದಲ್ಲಿ ಗುರುವಾರ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ಕಾಂಗ್ರೆಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು 2,268 ದಿನಗಳ ಕಾಲ ಪ್ರಧಾನಿಯಾಗಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ(67) ವಾಜಪೇಯಿ ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಮೂಲಕ ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಅವಧಿ ಆಡಳಿತ ನಡೆಸಿದ ಪ್ರಧಾನಿಗಳ ಪೈಕಿ ನಾಲ್ಕನೇ ಸ್ಥಾನ ಅಲಂಕರಿಸಿದ್ದಾರೆ.

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅತಿ ಹೆಚ್ಚು ಅವಧಿ ಪ್ರಧಾನಿಯಾಗಿ ಆಡಳಿತ ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ನೆಹರು 16 ವರ್ಷ ಹಾಗೂ 286 ದಿನಗಳ ಕಾಲ ಪ್ರಧಾನಿಯಾಗಿದ್ದರು. ಇವರ ಮಗಳು ಇಂದಿರಾ ಗಾಂಧಿ ಎರಡನೇ ಸ್ಥಾನದಲ್ಲಿದ್ದು, 11 ವರ್ಷ ಹಾಗೂ 59 ದಿನ ಆಡಳಿತ ನಡೆಸಿದ್ದಾರೆ.

ಇದಾದ ಬಳಿಕ ಈ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು 3ನೇ ಸ್ಥಾನದಲ್ಲಿದ್ದು, ಇವರು 10 ವರ್ಷ ಹಾಗೂ 4 ದಿನಗಳ ಕಾಲ ಪ್ರಧಾನಿಯಾಗಿದ್ದರು.

ನರೇಂದ್ರ ಮೋದಿಯವರು ಪ್ರಧಾನಿಯಾಗಿ 6 ವರ್ಷ ಪೂರೈಸಿದ್ದು, ಬಿಜೆಪಿ ಭರ್ಜರಿ 303 ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಮೋದಿ ಎರಡನೇ ಬಾರಿ ಪ್ರಧಾನಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಎನ್‍ಡಿಎ ಕೂಟ ಒಟ್ಟು 353 ಸ್ಥಾನಗಳಲ್ಲಿ ಜಯಗಳಿಸಿದೆ.

ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ 3 ದಾಖಲೆಗಳನ್ನು ಮಾಡಿದ್ದಾರೆ. ರಾಮಜನ್ಮ ಭೂಮಿಗೆ ಭೇಟಿ ನೀಡಿದ ಮೊದಲ ಪ್ರಧಾನಿಯಾಗಿದ್ದಾರೆ. ಅಲ್ಲದೆ ಕೊರೊನಾ ವೈರಸ್ ವಿರುದ್ಧ ಹೋರಾಡಲು ಮಾರ್ಚ್ 24ರಂದು 21 ದಿನಗಳ ಲಾಕ್‍ಡೌನ್ ಘೋಷಿಸಿದ್ದರು. ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಜನ ವೀಕ್ಷಿಸಿದ ಭಾಷಣ ಎಂಬ ದಾಖಲೆಯನ್ನು ಇದು ಬರೆದಿತ್ತು.

ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಟ್ವಿಟ್ಟರ್ ನಲ್ಲಿ 50 ಮಿಲಿಯನ್(5 ಕೋಟಿ) ಫಾಲೋವರ್ಸ್ ಹೊಂದುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ಜನ ಫಾಲೋವರ್ಸ್ ಹೊಂದಿರುವ ಭಾರತದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿಯ ಟ್ವಿಟ್ಟರ್ ಖಾತೆಯನ್ನು 60.9 ಮಿಲಿಯನ್(6.10 ಕೋಟಿ) ಜನ ಫಾಲೋ ಮಾಡುತ್ತಿದ್ದಾರೆ. ಅಲ್ಲದೆ ಪ್ರಧಾನಿಗಳ ಅಧೀಕೃತ ಟ್ವಿಟ್ಟರ್ ಖಾತೆ 37.9 ಮಿಲಿಯನ್(3.07 ಕೋಟಿ) ಹಿಂಬಾಲಕರನ್ನು ಹೊಂದಿದೆ.

Click to comment

Leave a Reply

Your email address will not be published. Required fields are marked *