Connect with us

Latest

ಸಬರಮತಿ ಆಶ್ರಮದಿಂದ ದಂಡಿವರೆಗೆ ಪಾದಯಾತ್ರೆಗೆ ಮೋದಿ ಚಾಲನೆ

Published

on

– ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಕಾರ್ಯಕ್ರಮ
– ಇಡೀ ಜಗತ್ತಿಗೆ ಭಾರತ ಬೆಳಕು ತೋರಿಸಬೇಕಿದೆ

ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗುಜರಾತ್‍ನ ಅಹ್ಮದಾಬಾದ್‍ನ ಸಬರಮತಿ ಆಶ್ರಮದಿಂದ ದಂಡಿವರೆಗೆ ನಡೆಯಲಿರುವ ಪಾದಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷದ ಸಂಭ್ರಮದ ಹಿನ್ನೆಲೆ ಅಹ್ಮದಾಬಾದ್‍ನ ಸಬರಮತಿ ಆಶ್ರಮದಿಂದ ನವಸಾರಿ ಜಿಲ್ಲೆಯ ದಂಡಿ ವೆರೆಗೆ ಒಟ್ಟು 241 ಮೈಲಿಗಳಷ್ಟು ಪಾದಯಾತ್ರೆ ನಡೆಸಲಾಗುತ್ತಿದೆ. ಇದಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಅಲ್ಲದೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ದಂಡಿ ಸತ್ಯಾಗ್ರಹ ಆರಂಭವಾದ ಸಬರಮತಿ ಆಶ್ರಮದಿಂದ ಇಂದು ಅಮೃತ ಮಹೋತ್ಸವ ಆರಂಭವಾಗಿದೆ. ಈ ಪಾದಯಾತ್ರೆ ಪ್ರಮುಖ ಪಾತ್ರ ವಹಿಸಲಿದೆ. ಭಾರತ ಜನತೆಯಲ್ಲಿ ಹೆಮ್ಮೆಯ ಮನೋಭಾವ ಹಾಗೂ ಆತ್ಮನಿರ್ಭರತೆಯನ್ನು ಈ ಪಾದಯಾತ್ರೆ ಹೆಚ್ಚಿಸಲಿದೆ. ‘ವೋಕಲ್ ಫಾರ್ ಲೋಕಲ್’ ಮೂಲಕ ಬಾಪೂಜಿ ಹಾಗೂ ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮಹಾತ್ಮಾ ಗಾಂಧಿಯವರಿಗೆ ಗೌರವ ಸಲ್ಲಿಸಿದ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಸಬರಮತಿ ಆಶ್ರಮದ ಹೃದಯ ಕುಂಜ್‍ನಲ್ಲಿ ಬಾಪು ಅವರ ಭಾವಚಿತ್ರ ವೀಕ್ಷಿಸಿದರು. ಬಳಿಕ ನಗರದ ಅಭಯ್ ಘಾಟ್ ಬಳಿ ನಡೆದ ವಿಶೇಷ ಪ್ರದರ್ಶನದಲ್ಲಿ ಚಿತ್ರಗಳು, ನಿಯತಕಾಲಿಕೆಗಳು ಹಾಗೂ ಇತರ ಸಂಗ್ರಹಗಳನ್ನು ನೋಡಿದರು. ಅಲ್ಲದೆ ಅಭಯ್ ಘಾಟ್ ಬಳಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ವೀಕ್ಷಿಸಿದರು.

ಇಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಮೊದಲ ದಿನವಾಗಿದ್ದು, ಆಗಸ್ಟ್ 15, 2022ಕ್ಕೆ 75 ವಾರಗಳಿಗೂ ಮೊದಲೇ ಆರಂಭವಾಗಿದೆ. ಆಗಸ್ಟ್ 15, 2023ರ ವರೆಗೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಸ್ವಾತಂತ್ರ್ಯ ಹೋರಾಟ, 75ರ ಐಡಿಯಾಗಳು, 75ರ ಸಾಧನೆಗಳು, 75ರ ಕೆಲಸ ಹಾಗೂ ಪರಿಹಾರ. ಈ ಐದು ಸ್ತಂಭಗಳು ಭಾರತದ ಇನ್ನಷ್ಟು ಬೆಳವಣಿಗೆ ಹೊಂದಲು ಸ್ಫೂರ್ತಿ ನೀಡುತ್ತವೆ. ಸ್ವಾತಂತ್ರ್ಯ ಭಾರತದ ಈ ಐತಿಹಾಸಿಕ ಕ್ಷಣಕ್ಕೆ ನಾವು ಸಾಕ್ಷಿಯಾಗಿದ್ದೇವೆ. ನಾವೆಲ್ಲ ಅದೃಷ್ಟವಂತರು. ದಂಡಿ ಯಾತ್ರೆಯ ವಾರ್ಷಿಕೋತ್ಸವದಂದು ಬಾಪುವಿನ ಕರ್ಮ ತಾಣದಲ್ಲಿ ಇತಿಹಾಸ ನಿರ್ಮಾಣವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಈ ಕ್ಷಣ ಸಹ ಇತಿಹಾಸದ ಒಂದು ಭಾಗವಾಗುತ್ತದೆ ಎಂದು ಅವರು ತಿಳಿಸಿದರು.

ಕೋಟ್ಯಂತರ ಜನ ಸ್ವಾತಂತ್ರಕ್ಕಾಗಿ ಕಾಯುತ್ತಿದ್ದ, ಬ್ರಿಟಿಷ್ ಯುಗದ ಬಗ್ಗೆ ಯೋಚಿಸಿದಾಗ 75 ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯನ್ನು ಇನ್ನಷ್ಟು ಮಹತ್ವವಾಗಿಸಿದೆ. ಈ ದೇಶದ ಪ್ರತಿಯೊಬ್ಬ ನಾಗರಿಕನೂ ಆತ್ಮನಿರ್ಭರನಾಗುವ ಮೂಲಕ ವಿಶ್ವಕ್ಕೆ ಸರಿ ಮಾರ್ಗವನ್ನು ತೋರಿಸಬೇಕಿದೆ. ಲಸಿಕೆ ತಯಾರಿಕೆಯಲ್ಲಿ ಭಾರತದ ಸ್ವಾವಲಂಬನೆ ಇಡೀ ಜಗತ್ತಿಗೆ ಪ್ರಯೋಜನಕಾರಿ ಎಂಬುದು ಸಾಬೀತಾಗಿದೆ. ಭಾರತದ ಸಾಧನೆಗಳು ಇಂದು ಕೇವಲ ನಮಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಬೆಳಕು ತೋರಿಸಲಿವೆ ಎಂದು ಮೋದಿ ಭಾವನಾತ್ಮಕವಾಗಿ ಮಾತನಾಡಿದರು.

Click to comment

Leave a Reply

Your email address will not be published. Required fields are marked *