Connect with us

Latest

ಅಟಲ್ ಸುರಂಗ ಮಾರ್ಗ ಲೋಕಾರ್ಪಣೆ ಮಾಡಿದ್ರು ಪ್ರಧಾನಿ ಮೋದಿ

Published

on

ಶಿಮ್ಲಾ: ವಿಶ್ವದ ಅತೀ ಎತ್ತರ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ 9.2 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದ್ದಾರೆ.

ಇಂದು ಬೆಳಗ್ಗೆ ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿಯವರು, ಬೆಳಗ್ಗೆ 10.15ರ ಸುಮಾರಿಗೆ ಹಿಮಾಚಲಪ್ರದೇಶದ ರೋಹ್ಟಂಗ್ ನಲ್ಲಿರುವ ಸುರಂಗ ಮಾರ್ಗವನ್ನು ಉದ್ಘಾಟನೆ ಮಾಡಿದರು. ಪ್ರಧಾನಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತಿತರ ಗಣ್ಯರು ಈ ವೇಳೆ ಸಾಥ್ ನೀಡಿದರು. ಮನಾಲಿ- ಲೇಹ್ ನಡುವೆ ಈ ಸುರಂಗ ಮಾರ್ಗ ಇದಾಗಿದ್ದು, ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೊರೊನಾ ಮುನ್ನೆಚ್ಚರಿಕೆಯಾಗಿ ವೇದಿಕೆಯ ಸುತ್ತಮುತ್ತ ಸ್ಯಾನಿಟೈಸ್ ಮಾಡಲಾಗಿತ್ತು. ಅಲ್ಲದೆ ಸ್ಥಳದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಮನಾಲಿಯ ದಕ್ಷಿಣ ತುದಿಯಲ್ಲಿರುವ ಈ ಅಟಲ್ ಸುರಂಗ ಹೆದ್ದಾರಿಯೂ ವಿಶ್ವದಲ್ಲಿಯೇ ಅತಿ ಉದ್ದದ ಹೆದ್ದಾರಿ ಮಾರ್ಗವಾಗಿದ್ದು, 9.02 ಕಿ.ಮೀ ಉದ್ದದ ಈ ಸುರಂಗ ಮನಾಲಿಯಿಂದ ಲಹೌಲ್ ಸ್ಪಿತಿ ಕಣಿಯನ್ನು ವರ್ಷವಿಡೀ ಸಂಪರ್ಕಿಸಲಿದೆ. ಇದಕ್ಕೂ ಮುನ್ನ ಭಾರೀ ಹಿಮಪಾತದ ಕಾರಣ 6 ತಿಂಗಳುಗಳ ಕಾಲ ಮಾತ್ರ ಕಣಿವೆಯ ಸಂಪರ್ಕ ಕಡಿತವಾಗುತ್ತಿತ್ತು. ಈ ಸುರಂಗ ಮಾರ್ಗವು ಮನಾಲಿ ಮತ್ತು ಲೆಹ್ ನಡುವಿನ ಅಂತರವನ್ನು 46 ಕಿ.ಮೀ. ತಗ್ಗಿಸಲಿದ್ದು, 4ರಿಂದ 5 ಗಂಟೆಗಳ ಸಮಯ ಉಳಿತಾಯವಾಗಲಿದೆ.

ಹಿಮಾಲಯದ ಪಿರ್ ಪಂಜಾಲ್ ಶ್ರೇಣಿಯಲ್ಲಿ ಅತ್ಯಾಧುನಿಕ ವಿಶೇಷಣ (ಅಲ್ಟ್ರಾ ಮಾಡರ್ನ್ ಸ್ಪೆಸಿಫಿಕೇಷನ್ಸ್) ಗಳೊಂದಿಗೆ ನಿರ್ಮಿಸಲಾಗಿದ್ದು, ಇದನ್ನು ಸಮುದ್ರ ಮಟ್ಟದಿಂದ ಸರಾಸರಿ 3,000 ಮೀಟರ್ (10,000 ಅಡಿ) ಎತ್ತರದಲ್ಲಿ ನಿರ್ಮಿಸಲಾಗಿದೆ. ಅಟಲ್ ಸುರಂಗದ ದಕ್ಷಿಣ ಭಾಗದಲ್ಲಿ ಮನಾಲಿಯಿಂದ 25 ಕಿ.ಮೀ. ದೂರದಲ್ಲಿ, 3,060 ಮೀಟರ್ ಎತ್ತರದಲ್ಲಿದೆ. ಉತ್ತರದ ಭಾಗದ ಸುರಂಗವು ಲಹೌಲ್ ಕಣಿವೆಯ ಸಿಸ್ಸು, ತೆಲಿಂಗ್ ಗ್ರಾಮದ ಬಳಿಯಿದ್ದು, 3,071 ಮೀಟರ್ ಎತ್ತರದಲ್ಲಿದೆ. ಇದು ಕುದುರೆಯ ಲಾಳದ ಆಕಾರದಲ್ಲಿರುವ, ದ್ವಿಪಥ ಮಾರ್ಗದ ಸುರಂಗವಾಗಿದ್ದು, 8 ಮೀಟರ್ ರಸ್ತೆ ಮಾರ್ಗವನ್ನು ಒಳಗೊಂಡಿದೆ.

ಸುರಂಗದಲ್ಲಿ 5.525 ಮೀಟರ್ ಎತ್ತರದವರೆಗಿನ ವಾಹನಗಳ ಓಡಾಟಕ್ಕೆ ಅವಕಾಶವಿದೆ. ಸುರಂಗ 10.5 ಮೀಟರ್ ಅಗಲವಿದ್ದು, ಮುಖ್ಯ ಸುರಂಗದಲ್ಲಿ 3.6 x 2.25 ಮೀಟರ್ ಅಗ್ನಿನಿರೋಧಕ ತುರ್ತು ನಿರ್ಗಮನದ ಸುರಂಗವನ್ನೂ ಒಳಗೊಂಡಿದೆ. ಈ ಮಾರ್ಗದಲ್ಲಿ ನಿತ್ಯ 3,000 ಕಾರುಗಳು ಮತ್ತು 1,500 ಟ್ರಕ್ ಗಳು ಗರಿಷ್ಠ ಗಂಟೆಗೆ 80 ಕಿ.ಮೀ. ವೇಗದಲ್ಲಿ ಸಂಚಾರ ನಡೆಸಲು ಅವಕಾಶವಿರುವಂತೆ ನಿರ್ಮಾಣ ಮಾಡಲಾಗಿದೆ.

ಸುರಂಗ ಮಾರ್ಗವೂ ಸುಸಜ್ಜಿತ ಎಲೆಕ್ಟ್ರೋ ಮೆಕ್ಯಾನಿಕಲ್ ವ್ಯವಸ್ಥೆ ಹೊಂದಿದ್ದು, ಇದರಲ್ಲಿ ಸೆಮಿ ಟ್ರಾನ್ಸ್ ವರ್ಸ್ ವಾತಾಯಣ ವ್ಯವಸ್ಥೆ, ಎಸ್.ಸಿ.ಎ.ಡಿ.ಎ. ನಿಯಂತ್ರಿತ ಅಗ್ನಿಶಾಮಕ ಹೋರಾಟ ವ್ಯವಸ್ಥೆ, ಪ್ರಕಾಶಮಾನ ಬೆಳಕು ಮತ್ತು ಸಿಸಿಟಿವಿ ನಿಗಾ ವ್ಯವಸ್ಥೆಯೂ ಸೇರಿದೆ.

ಅಟಲ್ ಸುರಂಗ ವೈಶಿಷ್ಟ್ಯಗಳು:
ಸುರಂಗದ ಎರಡೂ ಬದಿಗಳಲ್ಲಿ ಪ್ರವೇಶ ನಿರ್ಬಂಧ. ತುರ್ತು ಸಂವಹನಕ್ಕಾಗಿ ಪ್ರತಿ 150 ಮೀಟರಿಗೊಂದರಂತೆ ದೂರವಾಣಿ ಸಂಪರ್ಕ ಸೇವೆ. ಪ್ರತಿ 60 ಮೀಟರಿಗೊಂದರಂತೆ ಅಗ್ನಿಶಾಮಕ ವ್ಯವಸ್ಥೆ. ಪ್ರತಿ 250 ಮೀಟರ್ ಗೆ ಒಂದರಂತೆ ಸಿಸಿಟಿವಿ ಕ್ಯಾಮೆರಾಗಳೊಂದಿಗೆ ಘಟನೆಯ ಸ್ವಯಂ ಪತ್ತೆ ವ್ಯವಸ್ಥೆ. ಪ್ರತಿ 1 ಕಿ.ಮೀನಲ್ಲಿ ವಾಯು ಗುಣಮಟ್ಟದ ನಿಗಾ. ಪ್ರತಿ 25 ಮೀಟರ್ ನಲ್ಲಿ ಸ್ಥಳಾಂತರಿಸಬಹುದಾದ ದೀಪ/ನಿರ್ಗಮನ ಚಿಹ್ನೆಗಳು. ಸುರಂಗದುದ್ದಕ್ಕೂ ಬೆಳಕಿನ ವ್ಯವಸ್ಥೆ. ಪ್ರತಿ 50 ಮೀಟರ್ ನಲ್ಲಿ ಫೈರ್ ರೇಟೆಡ್ ಡ್ಯಾಂಪರ್ ಗಳು. ಪ್ರತಿ 60 ಮೀಟರ್ ಗೆ ಒಂದು ಕ್ಯಾಮೆರಾ ಹೊಂದಿದೆ.

2000ರ ಜೂನ್ 03 ರಂದು ದಿವಂಗತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಸುರಂಗ ಮಾರ್ಗ ನಿರ್ಮಿಸುವ ಯೋಜನೆ ಮಾಡಲಾಗಿತ್ತು. ಇದರಂತೆ 2002ರ ಮೇ 26ರಂದು ಸುರಂಗದ ದಕ್ಷಿಣ ಭಾಗದ ಪ್ರವೇಶ ರಸ್ತೆಗೆ ಅಡಿಪಾಯ ಹಾಕಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ 2019ರ ಡಿಸೆಂಬರ್ 24ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರೋಹ್ಟಂಗ್ ಸುರಂಗಕ್ಕೆ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಹೆಸರು ನೀಡಿ ಅವರಿಗೆ ಗೌರವ ಸಲ್ಲಿಸಲು ನಿರ್ಧರಿಸಲಾಯಿತು.

Click to comment

Leave a Reply

Your email address will not be published. Required fields are marked *