Connect with us

Latest

ಪ್ರಧಾನಿ ಮೋದಿ ವಿದೇಶಿ ಪ್ರವಾಸಕ್ಕೆ 517 ಕೋಟಿ ಖರ್ಚು, 5 ವರ್ಷದಲ್ಲಿ 58 ದೇಶಗಳಿಗೆ ಭೇಟಿ

Published

on

– ರಾಜ್ಯ ಸಭೆಗೆ ವಿದೇಶಾಂಗ ಸಚಿವಾಲಯದ ಮಾಹಿತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕುತೂಹಲಕಾರಿ ಮಾಹಿತಿಯನ್ನು ನೀಡಿದ್ದು, ವಿದೇಶಿ ಪ್ರವಾಸಗಳಿಗೆ ಪ್ರಧಾನಿ ಮೋದಿಯವರ ಖರ್ಚು, ವೆಚ್ಚದ ಕುರಿತು ತಿಳಿಸಿದೆ.

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರದ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಮುರುಳೀಧರನ್ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. 2015ರಿಂದ ಪ್ರಧಾನಿ ನರೇಂದ್ರ ಮೋದಿಯವರು 58 ದೇಶಗಳಿಗೆ ಭೇಟಿ ನೀಡಿದ್ದು, ಒಟ್ಟು 517.82 ಕೋಟಿ ರೂ. ವೆಚ್ಚವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ ದೇಶಗಳ ಹೆಸರುಗಳನ್ನೂ ಸಹ ಪಟ್ಟಿ ಮಾಡಲಾಗಿದ್ದು, ಮಾರ್ಚ್ 2015ರಿಂದ ನವೆಂಬರ್ 2019ರ ವರೆಗೆ ಭೇಟಿ ನೀಡಿದ ದೇಶಗಳು, ಒಪ್ಪಂದ ಹಾಗೂ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ವೇಳೆ ಸಹಿ ಹಾಕಲಾಗಿರುವ ಒಪ್ಪಂದಗಳ ಕುರಿತು ಮಾಹಿತಿ ನೀಡಲಾಗಿದೆ.

ಪ್ರಧಾನಿ ಮೋದಿಯವರ ವಿದೇಶಿ ಪ್ರವಾಸದ ಕುರಿತು ಸಚಿವರು ವಿವರವಾದ ಉತ್ತರ ನೀಡಿದ್ದು, ವಿವಿಧ ದೇಶಗಳಿಗೆ ಅವರು ನೀಡಿದ ಭೇಟಿನಿಂದಾಗಿ ಭಾರತದ ವಿದೇಶಿ ಸಂಬಂಧ ವೃದ್ಧಿಸಿದೆ. ವಾಣಿಜ್ಯ, ಹೂಡಿಕೆ, ತಂತ್ರಜ್ಞಾನ, ಕಡಲತೀರ, ಬಾಹ್ಯಾಕಾಶ ಹಾಗೂ ರಕ್ಷಣಾ ವಲಯ ಸೇರಿದಂತೆ ವಿವಿಧ ವಿಚಾರಗಳಲ್ಲಿ ಸಂಬಂಧ ಸುಧಾರಿಸಿದೆ ಎಂದು ವಿವರಿಸಿದರು.

ಪ್ರಧಾನಿಗಳ ವಿದೇಶ ಪ್ರವಾಸದ ಸಮಯದಲ್ಲಿ ಪರಸ್ಪರ ಚರ್ಚೆ, ಇತರ ದೇಶಗಳೊಂದಿಗಿನ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಭಾರತದ ದೃಷ್ಟಿಕೋನವನ್ನು ಹೆಚ್ಚಿಸಿದೆ. ಈ ಮೂಲಕ ನಮ್ಮ ಜನರ ಆರ್ಥಿಕ ಬೆಳವಣಿಗೆ ಹಾಗೂ ಯೋಗಕ್ಷೇಮವನ್ನು ಉತ್ತೇಜಿಸಲು ಭಾರತದ ಅಭಿವೃದ್ಧಿ ಕಾರ್ಯಸೂಚಿಗೆ ಕೊಡುಗೆ ನೀಡಿವೆ ಎಂದು ಮಾಹಿತಿ ನೀಡಿದರು.

ಹವಾಮಾನ ಬದಲಾವಣೆ, ದೇಶೀಯ ಅಪರಾಧ ಮತ್ತು ಭಯೋತ್ಪಾದನೆ, ಸೈಬರ್ ಸುರಕ್ಷತೆ ಹಾಗೂ ಪರಮಾಣು ಪ್ರಸರಣ ಸೇರಿದಂತೆ ಬಹುಪಕ್ಷೀಯ ಮಟ್ಟದಲ್ಲಿ ಜಾಗತಿಕ ಕಾರ್ಯಸೂಚಿ ರೂಪಿಸುವಲ್ಲಿ ಭಾರತ ಹೆಚ್ಚಿನ ಕೊಡುಗೆ ನೀಡುತ್ತಿದೆ. ಅಲ್ಲದೆ ಅಂತರಾಷ್ಟ್ರೀಯ ಸೌರ ಒಕ್ಕೂಟದಂತಹ ಜಾಗತಿಕ ಸಮಸ್ಯೆಗಳಿಗೆ ತನ್ನದೇಯಾದ ವಿಶಿಷ್ಟ ಕಾರ್ಯಕ್ರಮಗಳನ್ನು ಜಗತ್ತಿಗೆ ನೀಡುತ್ತಿದೆ. ವಿಪತ್ತು ಸ್ಥಿತಿಸ್ಥಾಪಕ ಮೂಲ ಸೌಕರ್ಯಕ್ಕಾಗಿ ಒಕ್ಕೂಟವನ್ನು ರಚಿಸಿದೆ ಎಂದು ಅವರು ತಿಳಿಸಿದರು.

Click to comment

Leave a Reply

Your email address will not be published. Required fields are marked *