Connect with us

Latest

74ನೇ ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗ್ತಿದೆ ಇಡೀ ದೇಶ

Published

on

– ರಾಜ್ಯದಲ್ಲೂ ಸ್ವಾತಂತ್ರ್ಯ ದಿನಾಚರಣೆ ವಿಭಿನ್ನ

ನವದೆಹಲಿ: ಆಗಸ್ಟ್ 15 ಅಂದರೆ ನಾಳಿನ 74ನೇ ಸ್ವಾತಂತ್ರೋತ್ಸವಕ್ಕೆ ಇಡೀ ದೇಶವೇ ಸಜ್ಜಾಗುತ್ತಿದೆ. ದೇಶಾದ್ಯಂತ ಭಾರೀ ಬಿಗಿ ಭದ್ರತೆ ಕೈಕೊಳ್ಳಲಾಗಿದೆ.

ದೆಹಲಿಯ ಕೆಂಪು ಕೋಟೆ ಪ್ರದೇಶದಲ್ಲಿ 300 ಕ್ಯಾಮೆರಾಗಳು, 4 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಕ್ಕಿಂತ ಮುಖ್ಯವಾಗಿ ಕೊರೊನಾ ಹೆಮ್ಮಾರಿ ಇರುವ ಕಾರಣ ಮತ್ತಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಂಪುಕೋಟೆಯಲ್ಲಿ ಪ್ರತಿಬಾರಿ ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಿಲ್ಲ. ಭದ್ರತೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಯನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಗುರುವಾರವೂ ಕವಾಯತು ಪಡೆಗಳು ಮಾಸ್ಕ್ ಧರಿಸಿಯೇ ಪೂರ್ವ ತಾಲೀಮು ಮಾಡಿದವು.

ಸೇನಾ ಪಡೆಗಳು ಗಾಳಿಯಲ್ಲಿ 21 ಸುತ್ತು ಗುಂಡು ಹಾರಿಸಿ, ಪ್ರಧಾನಿ ಮೋದಿ ಅವರಿಗೆ ಗಾರ್ಡ್ ಆಫ್ ಹಾನರ್ ಗೌರವ ಸಲ್ಲಿಸಲಿವೆ. ಬಳಿಕ ಪ್ರಧಾನಿ ಮೋದಿ ಅವರು ಧ್ವಜಾರೋಹಣ ಮಾಡಲಿದ್ದು, ರಾಷ್ಟ್ರಗೀತೆ ಹಾಡಲಿದ್ದಾರೆ. ಬಳಿಕವಷ್ಟೇ ದೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಬಾರಿ ಕೊರೊನಾ ಇರೋ ಕಾರಣ ಕೊರೊನಾ, ಸ್ವಚ್ಛತೆ, ಸೇನಾಪಡೆಗಳ ಬಲವರ್ಧನೆ, ರಾಮಮಂದಿರ ಕುರಿತಂತೆಯೇ ಹೆಚ್ಚಿನ ಮಾತು ಇರಲಿದೆ ಎನ್ನಲಾಗುತ್ತಿದೆ.

ರೆಡ್‍ ಫೋರ್ಟ್ ಆವರಣವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಯ್ದ ಕೆಲವರಿಗಷ್ಟೇ ಆಹ್ವಾನ ನೀಡಲಾಗಿದೆ. ಕೇವಲ ಕೊರೊನಾ ವಾರಿಯರ್ಸ್‌ಗಳಾದ ಡಾಕ್ಟರ್, ನರ್ಸ್ ಹಾಗೂ ಕೊರೊನಾ ಗೆದ್ದ ಕೆಲವರಿಗೆ ಆಹ್ವಾನ ನೀಡಲಾಗುತ್ತಿದೆ. ಇವರೆಲ್ಲರೂ ಪಿಪಿಇ ಕಿಟ್ ಧರಿಸಿರಲಿದ್ದಾರೆ. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲಾಗಿದೆ. ರೆಡ್‍ ಫೋರ್ಟ್‌ನ 2 ಕಡೆಯ ಮೈದಾನಗಳು ಮುಚ್ಚಲ್ಪಟ್ಟಿರುತ್ತವೆ. ಕೇವಲ ಎನ್‍ಸಿಸಿ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಸಿಗಬಹುದು. ಇವರೆಲ್ಲರಿಗೂ ಮಾಸ್ಕ್ ಧರಿಸೋದು ಕಡ್ಡಾಯಗೊಳಿಸಲಾಗಿದೆ.

ರಾಜ್ಯದಲ್ಲೂ ವಿಭಿನ್ನವಾಗಿರಲಿದೆ ಸ್ವಾತಂತ್ರ್ಯ ದಿನಾಚರಣೆ
ರಾಜ್ಯದಲ್ಲೂ ಕೂಡ ಕೊರೊನಾ ಮಾರ್ಗಸೂಚಿ ಅನುಸಾರವೇ ಸ್ವಾತಂತ್ಯ ದಿನಾಚರಣೆ ನಡೆಯಲಿದೆ. ಕೇಂದ್ರ ಸರ್ಕಾರದ ಆದೇಶದಂತೆ ಹೆಚ್ಚು ಜನ ಒಂದೆಡೆ ಸೇರಲು ಅವಕಾವಿಲ್ಲ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸಾರ್ವಜನಿಕ ಪ್ರವೇಶವಿರುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾಣೆಕ್ ಷಾ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಡಿಸಿಪಿ ಸಿ.ಆರ್. ಗಿರೀಶ್ ಪರೇಡ್ ನೇತೃತ್ವ ವಹಿಸಲಿದ್ದಾರೆ. ಪರೇಡ್ ನಲ್ಲಿ ಟ್ರಾಫಿಕ್ ಪೊಲೀಸ್, ಕೆಎಸ್‌ಆರ್‌ಪಿ, ಬಿ.ಎಸ್.ಎಫ್, ಸಿಎಆರ್, ಟ್ರಾಫಿಕ್ ಪೊಲೀಸ್, ಮಹಿಳಾ ಪೊಲೀಸ್ ಸೇರಿದಂತೆ 16 ತುಕಡಿಗಳಲ್ಲಿ 350 ಮಂದಿ ಭಾಗವಹಿಸುತ್ತಾರೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಹೇಳಿದ್ದಾರೆ.

9 ಜನ ಡಿಸಿಪಿ ಸೇರಿದಂತೆ 680 ಜನ ಭದ್ರತಾ ಕೆಲಸದಲ್ಲಿ ಹಾಜರಿರುತ್ತಾರೆ. ಸ್ವಾತಂತ್ರ್ಯ ದಿನಾಚರಣೆ ವೀಕ್ಷಿಸಲು 500 ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿವಿಧ ಇಲಾಖೆಯ ಕೋವಿಡ್ ವಾರಿಯರ್ಸ್ 100 ಸಿಬ್ಬಂದಿ, ಕೋವಿಡ್ ನಿಂದ ಗುಣಮುಖರಾದ ಎಲ್ಲಾ ವಯೋಮಾನದ 25 ಜನರನ್ನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮ ನೇರ ಪ್ರಸಾರವನ್ನು ದೂರದರ್ಶನ ಮೂಲಕ ಪ್ರಸಾರ ಮಾಡಲಾಗುತ್ತಿದೆ.

Click to comment

Leave a Reply

Your email address will not be published. Required fields are marked *