Connect with us

Crime

ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!

Published

on

– ನಿತ್ಯ ಪೂಜೆ ಮಾಡುವ ಮನೆಗೇ ಕನ್ನ ಹಾಕಿದ್ದ ಸರ್ವಜ್ಞ

ಕೊಪ್ಪಳ: ಕಳ್ಳತನ ಮಾಡುವಾಗ ನೋಡಿದಳೆಂದು ಮನಯೊಡತಿಯನ್ನೇ ಅರ್ಚಕ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.

ಜಿಲ್ಲೆಯ ಗಂಗಾವತಿ ನಗರದ ಗುಂಡಮ್ಮನ ಕ್ಯಾಂಪ್ ನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಅರ್ಚಕ ಸರ್ವಜ್ಞ ತಾನು ನಿತ್ಯ ಪೂಜೆ ಮಾಡುತ್ತಿದ್ದ ಮನೆಯ ಒಡತಿ ಗುಂಡಮ್ಮನ ಕ್ಯಾಂಪ್ ನ ಶಿವಮ್ಮ(72) ಅಮರಜ್ಯೋತಿಯವರನ್ನು ಕೊಲೆ ಮಾಡಿದ್ದಾನೆ. ಕಳ್ಳತನ ಪ್ರಕರಣ ಬೇಧಿಸಲು ಮುಂದಾದ ಪೊಲೀಸರಿಗೆ ಆಘಾತವಾಗಿದ್ದು, ಕೊಲೆ ಪ್ರಕರಣ ಸಹ ಬೆಳಕಿಗೆ ಬಂದಿದೆ. ಇದೀಗ ಅರ್ಚಕ ಸರ್ವಜ್ಞ ಹಾಗೂ ಮನೆಯ ಗುಮಾಸ್ತ ಗಣೇಶನನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮ್ಮ ಅಮರಜ್ಯೋತಿಯವರ ಮನೆಯಲ್ಲಿ ಮಾರ್ಚ್ 5ರಂದು ಕಳ್ಳತನವಾಗಿತ್ತು. ಅದೇ ದಿನ 72 ವರ್ಷದ ಶಿವಮ್ಮ ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಮನೆಯವರು ಭಾವಿಸಿದ್ದರು. ಆದರೆ ಶಿವಮ್ಮಗೆ ಹೃದಯಾಘಾತವಾಗಿರಲಿಲ್ಲ, ಬದಲು ಕೊಲೆ ಮಾಡಲಾಗಿತ್ತು. ಮನೆ ಕಳ್ಳತನವಾಗಿದ್ದರಿಂದ ಮಾಲೀಕ ನರಸಪ್ಪ ಅಮರಜ್ಯೋತಿ ದೂರು ದಾಖಲಿಸಿದ್ದರು. ಆದರೆ ಮನೆ ಕಳ್ಳತನ ಪ್ರಕರಣ ಭೇದಿಸುವ ವೇಳೆ ಅಸಲಿ ಮರ್ಡರ್ ಕಹಾನಿ ಹೊರ ಬಿದ್ದಿದೆ.

ಮನೆ ಕಳ್ಳತನವಾದ ದಿನ ಶಿವಮ್ಮ ಹೃದಯಾಘಾತದಿಂದ ಸಾವನ್ನಪ್ಪಿಲ್ಲ. ಅಸಲಿಗೆ ಮನೆ ಅರ್ಚಕ ಸರ್ವಜ್ಞ ಬ್ರಾಹ್ಮಣ ಶಿವಮ್ಮಳನ್ನು ಕೊಲೆ ಮಾಡಿದ್ದ. ಕಳ್ಳತನ ಮಾಡುವಾಗ ಶಿವಮ್ಮ ನೋಡಿದ್ದಳು. ಹೀಗಾಗಿ ಅರ್ಚಕ ಸರ್ವಜ್ಞ ಶೌಚಾಲಯದ ರೂಮ್ ನಲ್ಲಿ ಶಿವಮ್ಮಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಅರ್ಚಕ ತನ್ನ ಒಡೆಯನ ಮನೆಯಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರ ಹಾಗೂ ನಗದು ಕಳ್ಳತನ ಮಾಡಿ ಮನೆ ಹಿಂದೆ ಬಚ್ಚಿಟ್ಟಿದ್ದ. ಈ ವಿಷಯವನ್ನು ಗುಮಾಸ್ತ ಗಣೇಶ್‍ಗೆ ತಿಳಿಸಿ ಬಂಗಾರದ ಪೆಟ್ಟಿಗೆ ತಗೆದುಕೊಂಡು ಹೋಗುವಂತೆ ಸೂಚಿಸಿದ್ದನು. ಮನೆ ಕಳ್ಳತನ ಪ್ರಕರಣ ಬೆನ್ನು ಹತ್ತಿದ ಪೊಲೀಸರಿಗೆ ಸಿಕ್ಕಿದ್ದು ಕೊಲೆಗಾರರು. ಇದೀಗ ಅರ್ಚಕ ಸರ್ವಜ್ಞ ಹಾಗೂ ಗುಮಾಸ್ತ ಗಣೇಶನ್ನು ಪೊಲೀಸರು ಬಂಧಿಸಿದ್ದು, ಜೈಲಿಗೆ ಅಟ್ಟಿದ್ದಾರೆ.

ಅರ್ಚಕ ಸಿಕ್ಕಿಬಿದ್ದಿದ್ದೇಗೆ?
ಅರ್ಚಕ ಸರ್ವಜ್ಞ ಸಿಕ್ಕಿ ಬೀಳಲು ಮನೆಯಲ್ಲಿ ಅಳವಡಿಸಿದ ಸಿ.ಸಿ.ಕ್ಯಾಮೆರಾ ಕಾರಣವಾಗಿದ್ದು, ಶಿವಮ್ಮ ಅಮರಜ್ಯೋತಿ ಮನೆಯಲ್ಲಿ ಸಿಸಿ ಕ್ಯಾಮೆರಾಗೆ ಯಾರೋ ಟವೆಲ್ ಹಾಕಿದ್ದು ಸೆರೆಯಾಗಿದೆ. ಈ ಹಿನ್ನಲೆ ಶಿವಮ್ಮ ಸಾವನ್ನಪ್ಪಿದ ದಿನ ಮನೆಯವರು ದುಃಖದಲ್ಲಿದ್ದರು. ಮರು ದಿನ ಸಿಸಿ ಕ್ಯಾಮೆರಾ ನೋಡಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ತನಿಖೆ ವೇಳೆ ಅರ್ಚಕ ಸರ್ವಜ್ಞ ಸತ್ಯ ಬಾಯಿ ಬಿಟ್ಟಿದ್ದಾನೆ.

ಅರ್ಚಕ ಹಾಗೂ ಗಣೇಶ್ ಕಾರಿಗಾಗಿ ಸಾಲ ಮಾಡಿಕೊಂಡಿದ್ದು, ಸಾಲದ ಹಣ ತೀರಿಸಲು ಶಿವಮ್ಮ ಮನೆಯಲ್ಲಿದ್ದ ಹಣ, ಬಂಗಾರದ ಪೆಟ್ಟಿಗೆಯನ್ನ ಕಳ್ಳತನ ಮಾಡಲು ಸ್ಕೆಚ್ ಹಾಕಿದ್ದನು. ನಿತ್ಯ ಎಂಟು ಗಂಟೆಗೆ ಪೂಜೆ ಮಾಡಲು ಬರ್ತಿದ್ದ ಅರ್ಚಕ, ಮಾರ್ಚ್ 5ರಂದು ಬೆಳಗಿನ ಜಾವ 6 ಗಂಟೆಗೆ ಪೂಜೆ ಮಾಡಲು ಬಂದಿದ್ದ. ಪೂಜೆ ನೆಪದಲ್ಲಿ ಬಂಗಾರದ ಪೆಟ್ಟಿಗೆ ಮನೆ ಹಿಂದೆ ಇಟ್ಟು ಹಣ ದರೋಡೆ ಮಾಡಲು ಪ್ರಯತ್ನ ಮಾಡಿದ್ದು, ಇದನ್ನು ಶಿವಮ್ಮ ನೋಡಿದ್ದರು. ಬಳಿಕ ಶಿವಮ್ಮಳನ್ನು ಶೌಚಾಲಯದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿ ನಾಟಕ ಮಾಡಿದ್ದನು. ಶಿವಮ್ಮ ಮೃತಳಾದ ದಿನ ಮನೆಯವರೊಂದಿಗೆ ಏನೂ ಅನುಮಾನ ಬಾರದಂತೆ ಅರ್ಚಕ ನಡೆದುಕೊಂಡಿದ್ದ. ಅಲ್ಲದೆ ಮನೆಯವರಿಗೆ ಸಮಾಧಾನ ಮಾಡಿದ್ದ. ಹೊಂಚು ಹಾಕಿ ಕಳ್ಳತನ ಮಾಡಿದ್ದ ಅರ್ಚಕ ಇದೀಗ ಮನೆ ಒಡತಿಯನ್ನೆ ಕೊಂದಿದ್ದು, ಇಡೀ ಮನೆಗೆ ಶಾಕ್ ಆಗಿದೆ.

ಎರಡು ವರ್ಷಗಳ ಕಾಲ ಮನೆಯಲ್ಲಿ ಪೂಜೆ ಮಾಡಿದ ಅರ್ಚಕ, ಹಣದಾಸೆಗೆ ಮನೆ ಒಡತಿಯನ್ನೆ ಕೊಲೆ ಮಾಡಿದ್ದಾನೆ. ಇಡೀ ಕುಟುಂಬ ಅರ್ಚಕ ಸರ್ವಜ್ಞನನ್ನು ಮನೆ ಮಗನಂತೆ ನೋಡಿಕೊಂಡಿತ್ತು. ಆದರೆ ಹಣದಾಸೆಗೆ ಮನೆ ಒಡತಿಯನ್ನೇ ಕೊಲೆ ಮಾಡಿದ ಅರ್ಚಕ ಸರ್ವಜ್ಞನ ವಿರುದ್ಧ ಮನೆಯವರು ಹಿಡಿಶಾಪ ಹಾಕುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *