Connect with us

Latest

9 ಕ್ಯಾನ್ಸರ್ ಔಷಧಿಗಳ ಬೆಲೆ 87% ಇಳಿಕೆ!

Published

on

ನವದೆಹಲಿ: ಬಡ ಕ್ಯಾನ್ಸರ್ ರೋಗಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಸಹಾಯವಾಗಲೆಂದು ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ(ಎನ್‍ಪಿಪಿಎ) 9 ಕ್ಯಾನ್ಸರ್ ಔಷಧಿಗಳ ಬೆಲೆಯನ್ನು 87%ದಷ್ಟು ಇಳಿಕೆ ಮಾಡಿದೆ.

ಈ ಒಂಬತ್ತು ಔಷಧಿಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಕಿಮೊಥೆರಪಿ ಚುಚ್ಚುಮದ್ದುಗಳು ಒಳಗೊಂಡಿದೆ. ಪರಿಷ್ಕೃತ ಆದೇಶದ ಪ್ರಕಾರ, ಶ್ವಾಸಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಲು ಬಳಸಲಾಗುವ ಪೆಮ್ಸೆಸೆಲ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುತ್ತಿದ್ದ 500 ಮಿ.ಗ್ರಾಂ ಇಂಜೆಕ್ಷನ್ ಬೆಲೆ 22,000 ರೂ.ಗಳಿಂದ 2,800 ರೂ.ಗೆ ಇಳಿದಿದೆ. ಹಾಗೆಯೇ 100 ಮಿ.ಗ್ರಾಂ ಡೋಸ್ ಇದೇ ಇಂಜೆಕ್ಷನ್ ಬೆಲೆ 7,700 ರೂ.ಗಳಿಂದ 800 ರೂಪಾಯಿಗೆ ಇಳಿದಿದೆ.

ಅದೇ ರೀತಿ, ಎಪಿಕ್ಲೋರ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಎಪಿರುಬಿಸಿನ್ 10 ಮಿ.ಗ್ರಾಂ ಡೋಸ್ ಇಂಜೆಕ್ಷನ್‍ಗೆ 561 ರೂ.ಗಳಿಂದ 276.8 ರೂಪಾಯಿಗೆ ಇಳಿದಿದೆ. ಅದೇ ಇಂಜೆಕ್ಷನ್‍ನ 50 ಮಿ.ಗ್ರಾಂ ಡೋಸ್ ಬೆಲೆ 2,662 ರೂ.ಗಳಿಂದ 960 ರೂ. ಆಗಿದೆ.

ಎರ್ಲೋಟಾಜ್ ಬ್ರಾಂಡ್ ಹೆಸರಿನಲ್ಲಿ ಮಾರಾಟವಾಗುವ ಎರ್ಲೋಟಿನಿಬ್ 100 ಮಿ.ಗ್ರಾಂ 10 ಮಾತ್ರೆಗಳುಳ್ಳ ಪ್ಯಾಕ್‍ಗೆ 6,600 ರೂ.ಗಳಿಂದ 1,840 ರೂ.ಗೆ ಬಂದಿದೆ. ಹಾಗೆಯೇ 150 ಮಿ.ಗ್ರಾಂನ 10 ಮಾತ್ರೆಗಳುಳ್ಳ ಒಂದು ಪ್ಯಾಕ್ ಬೆಲೆ 8,800 ರೂ.ಗಳಿಂದ 2,400 ರೂ.ಗೆ ಇಳಿಕೆಯಾಗಿದೆ.

ಲಾನೋಲಿಮಸ್ ಹೆಸರಿನಲ್ಲಿ ಮಾರಾಟವಾಗುವ ಎವೆರೋಲಿಮಸ್‍ನ ಬೆಲೆ 0.25 ಮಿ.ಗ್ರಾಂ ಮತ್ತು 0.5 ಮಿ.ಗ್ರಾಂನ ಡೋಸ್‍ಗೆ 1,452 ರೂ., 726 ಹಾಗೂ 739 ರೂ.ಗಳಿಂದ 406 ರೂ.ಗೆ ಇಳಿಕೆಯಾಗಿದೆ.

ಈ ಬಗ್ಗೆ ಆರೋಗ್ಯ ಉದ್ಯಮದ ವಕ್ತಾರರು ಪ್ರತಿಕ್ರಿಯಿಸಿ, ಔಷಧಿಗಳ ಬೆಲೆ ಕಡಿಮೆ ಮಾಡುವ ಹಿನ್ನೆಲೆ ಔಷಧಿಯ ಗುಣಮಟ್ಟ ಹಾಗೂ ಪ್ರಮಾಣವನ್ನು ಕಡಿತಗೊಳಿಸಬಾರದು ಎಂದು ಕಂಪೆನಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಎನ್‍ಪಿಪಿಎ ದೇಶದಲ್ಲಿ ಔಷಧಿ ಬೆಲೆಗಳನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿಯಂತ್ರಿಸುವ ಯೂನಿಯನ್ ಸಚಿವಾಲಯವಾದ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಖಾತೆಯ ಅಡಿಯಲ್ಲಿ ಬರುವ ಸ್ವತಂತ್ರ ಸಂಸ್ಥೆಯಾಗಿದೆ. ಮಾರ್ಚ್ ನಂತರ ಎರಡನೇ ಭಾರಿ ಎನ್‍ಪಿಪಿಎ ಕ್ಯಾನ್ಸರ್ ಔಷಧಿಗಳ ಬೆಲೆಯನ್ನು ಕಡಿತಗೊಳಿಸಿದೆ.