Connect with us

Latest

ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂಗೆ ನರೇಂದ್ರ ಮೋದಿ ಹೆಸರು ನಾಮಕರಣ

Published

on

ಅಹಮದಾಬಾದ್‌: ವಿಶ್ವದ ಅತಿದೊಡ್ಡ ಕ್ರಿಕೆಟ್‌ ಸ್ಟೇಡಿಯಂಗೆ ʼನರೇಂದ್ರ ಮೋದಿ ಸ್ಟೇಡಿಯಂʼ ಎಂದು ಹೆಸರಿಡಲಾಗಿದೆ.

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಈ ಕ್ರೀಡಾಂಗಣವನ್ನು ಇಂದು ಅಧಿಕೃತವಾಗಿ ಉದ್ಘಾಟಿಸಿದರು. ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಮೂರನೇ ಟೆಸ್ಟ್‌ ಪಂದ್ಯ ಇಂದಿನಿಂದ ಈ ಕ್ರೀಡಾಂಗಣದಲ್ಲಿ ಆರಂಭವಾಗಿದೆ.

ಟೆಸ್ಟ್‌ ಪಂದ್ಯ ಆರಂಭಕ್ಕೂ ಮೊದಲು ಉದ್ಘಾಟನಾ ಸಮಾರಂಭ ನಡೆಯಿತು. ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್‌ ಶಾ, ಗುಜರಾತ್‌ ರಾಜ್ಯಪಾಲರು, ಕೇಂದ್ರ ಕ್ರೀಡಾ ಮಂತ್ರಿ ಕಿರಣ್‌ ರಿಜಿಜು, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಅಮಿತ್‌ ಶಾ, ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಆಗಿದ್ದಾಗ ಗುಜರಾತಿಗಳು ಕ್ರೀಡೆ ಮತ್ತು ಸಶಸ್ತ್ರ ಪಡೆ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಬೇಕು ಎಂದು ಅವರು ಹೇಳುತ್ತಿದ್ದರು. ಅವರು ನನ್ನ ಕೋರಿಕೆಯ ಮೇರೆಗೆ ಗುಜರಾತ್‌ ಕ್ರಿಕೆಟ್‌ ಅಸೋಸಿಯೇಸನ್‌(ಜಿಸಿಎ) ಉಸ್ತುವಾರಿ ವಹಿಸಿಕೊಂಡರು ಮತ್ತು ಇಲ್ಲಿ ಕ್ರೀಡೆಗಳನ್ನು ಆಯೋಜಿಸಲು ಪ್ರೋತ್ಸಾಹಿಸಿದರು. ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಇಲ್ಲಿ ನಿರ್ಮಿಸಬೇಕು ಎಂದು ಅವರು ಕನಸು ಕಂಡಿದ್ದರು. ಈ ಕನಸು ನನಸಾಗಿದ್ದು 1,32,000 ಆಸನಗಳಿರುವ ಈ ಕ್ರೀಡಾಂಗಣವನ್ನು ನರೇಂದ್ರ ಮೋದಿ ಕ್ರೀಡಾಂಗಣ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.

ಮೊಟೆರಾದ ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಪೋರ್ಟ್ಸ್‌ ಎನ್‍ಕ್ಲೇವ್ ಹಾಗೂ ನರೇಂದ್ರ ಮೋದಿ ಕ್ರೀಡಾಂಗಣದೊಂದಿಗೆ ನಾರನ್‍ಪುರದಲ್ಲಿಯೂ ಕ್ರೀಡಾ ಸಂಕೀರ್ಣವನ್ನು ನಿರ್ಮಿಸಲಾಗುವುದು. ಈ ಮೂರರಲ್ಲಿ ಯಾವುದೇ ಅಂತರಾಷ್ಟ್ರೀಯ ಕ್ರೀಡಾಕೂಟವನ್ನು ನಡೆಸಬಹುದಾಗಿದೆ. ಈ ಮೂಲಕ ಅಹಮದಾಬಾದ್‌ ನಗರವನ್ನು ಭಾರತದ ಕ್ರೀಡಾ ನಗರವನ್ನಾಗಿ ರೂಪಿಸಲಾಗುತ್ತದೆ ಎಂದು ತಿಳಿಸಿದರು.

ರಾಷ್ಟ್ರಪತಿ ಕೋವಿಂದ್‌ ಅವರು ಮಾತನಾಡಿ, 2018ರ ನವೆಂಬರ್‌ನಲ್ಲಿ ನಾನು ಆಸ್ಟ್ರೇಲಿಯಾಗೆ ತೆರಳಿದಾಗ 90 ಸಾವಿರ ಆಸನಗಳು ಇರುವ ಮೆಲ್ಬರ್ನ್‌ ಕ್ರಿಕೆಟ್‌ ಅಂಗಳ ವಿಶ್ವದ ಅತಿ ದೊಡ್ಡ ಸ್ಟೇಡಿಯಂ ಆಗಿದೆ ಎಂಬುದನ್ನು ನಾನು ಕೇಳಲ್ಪಟ್ಟೆ. ಆದರೆ ಈಗ ಇಲ್ಲಿ 1.32 ಲಕ್ಷ ಆಸನಗಳು ಇರುವ ವಿಶ್ವದ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಆಗಿ ಹೊರಹೊಮ್ಮಿದ್ದು ಭಾರತಕ್ಕೆ ಹೆಮ್ಮೆ ತರುವ ವಿಚಾರ ಎಂದು ಹೇಳಿದರು.

ಕ್ರೀಡಾಂಗಣದ ವಿಶೇಷತೆ ಏನು?
ಒಟ್ಟು 63 ಎಕರೆ ಜಾಗದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಕ್ರೀಡಾಂಗಣದ ಒಳಭಾಗದಲ್ಲಿ 76 ಕಾರ್ಪೊರೇಟ್ ಬಾಕ್ಸ್ ಗಳು, ಮೂರು ಅಭ್ಯಾಸ ಮೈದಾನಗಳು ಮತ್ತು ಸುಸಜ್ಜಿತ ನಾಲ್ಕು ಡ್ರೆಸ್ಸಿಂಗ್ ರೂಂ ಇದೆ. ಹೊನಲು ಬೆಳಕಿನಲ್ಲಿ ಪಂದ್ಯ ನಡೆಯುವ ಕಾರಣ ನೆರಳಿನ ಬಿಂಬಗಳನ್ನು ಮರೆಮಾಚಲು ಎಲ್‍ಇಡಿ ಬಲ್ಬ್ ಗಳನ್ನು ಹಾಕಲಾಗಿದೆ.

ಮಳೆ ಬಂದರೆ ಪರಿಹಾರವಾಗಿ ಮೈದಾನವನ್ನು ಒಣಗಿಸಲು ಸಬ್ ಏರ್ ಸಿಸ್ಟಂ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಮಳೆ ನಿಂತು ಅರ್ಧ ಗಂಟೆಗೆ ಮೈದಾನ ಒಣಗುತ್ತದೆ.

ಮೂರನೇ ಟೆಸ್ಟ್ ಪಂದ್ಯ ಹಲವು ವಿಶೇಷಗಳಿಂದ ಕೂಡಿದ್ದು, ಈಗಾಗಲೇ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯುವ ಟೆಸ್ಟ್ ಪಂದ್ಯದ ಶೇ.50 ರಷ್ಟು ಟೆಕೆಟ್ ಕೂಡ ಸೇಲ್ ಆಗಿದೆ. ಒಟ್ಟು 1.10 ಲಕ್ಷ ಪ್ರೇಕ್ಷಕ ಗ್ಯಾಲರಿ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣದಲ್ಲಿ ಕೊರೊನಾ ಕಾರಣದಿಂದಾಗಿ ಶೇ.50 ಮಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ.

Click to comment

Leave a Reply

Your email address will not be published. Required fields are marked *