Connect with us

Latest

ವಿಶ್ವದ ಅತಿದೊಡ್ಡ ಲಸಿಕಾ ಕಾರ್ಯಕ್ರಮಕ್ಕೆ ಭಾರತ ತಯಾರಿ – ಮೋದಿ

Published

on

ನವದೆಹಲಿ: 2021ರಲ್ಲಿ ಭಾರತವು ವಿಶ್ವದ ಅತಿದೊಡ್ಡ ಲಸಿಕಾ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತಿನ ರಾಜ್‍ಕೋಟ್‍ನಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಶಂಕುಸ್ಥಾಪನಾ ಕಾರ್ಯಕ್ರಮನ್ನು ನಡೆಸಿ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು.

ಸ್ವಾಸ್ಥ್ಯ ಹೈ ಸಂಪದ ಹೈ ಎನ್ನುವುದನ್ನು 2020ನೇ ವರ್ಷ ನಮಗೆ ಸರಿಯಾಗಿ ಮನವರಿಕೆ ಮಾಡಿಕೊಟ್ಟಿದೆ. ಸವಾಲುಗಳಿಂದಲೇ ತುಂಬಿದ ವರ್ಷವಾಗಿತ್ತು. ಇದೀಗ ಭಾರತವು ವಿಶ್ವದ ಲಸಿಕೆ ವಿಚಾರದಲ್ಲಿ ಕೇಂದ್ರ ಸ್ಥಳವಾಗಿ ಹೊರಹೊಮ್ಮಿದೆ. 2021ರಲ್ಲಿ ಭಾರತವು ಆರೋಗ್ಯ ರಕ್ಷಣೆಯಲ್ಲಿ ಹೆಚ್ಚಿನ ಕಾಳಜಿ ವಹಿಸಿ ಬಲವರ್ಧಿಸಿಕೊಳ್ಳಬೇಕು ಎಂದು ಮೋದಿ ಅಭಿಪ್ರಾಯಪಟ್ಟರು.

ನಮ್ಮ ದೇಶದಲ್ಲಿ ವದಂತಿಗಳು ಅತೀ ವೇಗವಾಗಿ ಹಬ್ಬುತ್ತದೆ. ವಿಭಿನ್ನ ಮನಸ್ಥಿತಿಯ ವ್ಯಕ್ತಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬೇಜವಾಬ್ದಾರಿತನದ ವದಂತಿಗಳನ್ನು ಹರಡುತ್ತಾರೆ. ಲಸಿಕಾ ಕಾರ್ಯಕ್ರಮ ಪ್ರಾರಂಭವಾದಾಗಲೂ ಇದೇ ರೀತಿಯ ವದಂತಿಗಳು ಹರಡಬಹುದು. ಕೆಲವರು ಈಗಾಗಲೇ ಆರಂಭಿಸಿದ್ದಾರೆ. ನೀವೂ ವದಂತಿಗಳ ಬಗ್ಗೆ ಜಾಗರೂಕರಾಗಿರಿ. ಜವಬ್ದಾರಿಯುತ ನಾಗರೀಕರಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ರವಾನಿಸುವಾಗ ಸರಿಯಾಗಿ ಪರಿಶೀಲನೆ ಮಾಡಿ ಇತರರಿಗೆ ಕಳುಹಿಸಿ ಎಂದು ಕಿವಿಮಾತು ಹೇಳಿದರು.

ಮುಂದಿನ ವರ್ಷ ಅತೀ ದೊಡ್ಡ ಲಸಿಕಾ ಕಾರ್ಯಕ್ರಮ ಆರಂಭವಾಗುತ್ತಿರುವುದರಿಂದ ಭಾರತದಲ್ಲಿ ಈಗ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಗುಜರಾತ್‍ ರಾಜ್ಯಪಾಲ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮತ್ತು ಕೇಂದ್ರದ ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಉಪಸ್ಥಿತರಿದ್ದರು.

ರಾಜ್‍ಕೋಟ್‍ನಲ್ಲಿ ಸ್ಥಾಪನೆಯಾಗುತ್ತಿರುವ ಏಮ್ಸ್‌ ಆಸ್ಪತ್ರೆಗಾಗಿ ಒಟ್ಟು 201 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಅಂದಾಜು 1,195 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಈ ಯೋಜನೆಯು 2022ರ ಮಧ್ಯಭಾಗದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಅತ್ಯಾಧುನಿಕ 750 ಹಾಸಿಗೆಗಳ ಆಸ್ಪತ್ರೆ ಇದಾಗಿದ್ದು, 30 ಆಯುಷ್ ಬ್ಲಾಕ್ ಕೂಡ ಇದೆ. ಇದು 125 ಎಂಬಿಬಿಎಸ್ ಮತ್ತು 60 ನರ್ಸಿಂಗ್ ಸೀಟುಗಳನ್ನು ಹೊಂದಿರಲಿದೆ ಎಂದು ಪ್ರಧಾನಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

Click to comment

Leave a Reply

Your email address will not be published. Required fields are marked *

www.publictv.in