Connect with us

Cinema

ಕ್ವಾರಂಟೈನ್‍ನಲ್ಲಿದ್ದರೂ ತಂಡಕ್ಕಾಗಿ ‘ಪ್ರೀತಿ’ಯ ಸಂದೇಶ

Published

on

– ಪಂಜಾಬ್ ತಂಡದಲ್ಲಿ ಕನ್ನಡಿಗರದ್ದೇ ಪಾರುಪತ್ಯ

ಅಬುಧಾಬಿ: ಕ್ವಾರಂಟೈನ್‍ನಲ್ಲಿದ್ದರೂ ಕೂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ತಮ್ಮ ತಂಡಕ್ಕಾಗಿ ವಿಡಿಯೋ ಸಂದೇಶ ಕಳುಹಿಸಿದ್ದಾರೆ.

ಐಪಿಎಲ್ ಹಬ್ಬ ಶುರುವಾಗಲು ಇನ್ನು ಕೇವಲ ಮೂರು ದಿನ ಬಾಕಿ ಇದೆ. ಈಗಾಗಲೇ ಸಿದ್ಧತೆಯಲ್ಲಿ ತೊಡಗಿರುವ ಎಲ್ಲ ತಂಡಗಳು ಕೂಡ ಟ್ರೋಫಿ ಮೇಲೆ ಕಣ್ಣಿಟ್ಟಿವೆ. ನೂತನ ಸಾರಥಿ ಮತ್ತು ಹೊಸ ಉತ್ಸಹದೊಂದಿಗೆ ಕಿಂಗ್ಸ್ ಇಲೆವೆನ್ ತಂಡ ತನ್ನ ಚೊಚ್ಚಲ ಟ್ರೋಫಿ ಗೆಲ್ಲಲು ತುದಿಗಾಲಲ್ಲಿ ನಿಂತಿದೆ. ಆಟಗಾರರನ್ನು ಹುರಿದುಂಬಿಸಲು ಗುಳಿಕನ್ನೆ ಮಾಲಕಿ ಪ್ರೀತಿ ಜಿಂಟಾ ಕೂಡ ಬಂದಿದ್ದಾರೆ.

ಈಗ ತಮ್ಮ ತಂಡಕ್ಕಾಗಿ ವಿಡಿಯೋ ಸಂದೇಶವೊಂದನ್ನು ಕಳುಹಿಸಿರುವ ಜಿಂಟಾ, ನೀವು ಕಠಿಣವಾಗಿ ಅಭ್ಯಾಸ ಮಾಡುತ್ತಿರುವುದನ್ನು ನಾನು ಸಾಮಾಜಿಕ ಜಾಲತಾಣದ ಮೂಲಕ ನೋಡಿದ್ದೇನೆ. ನೀವು ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದೀರಾ, ನಾನು ಈ ಕ್ವಾರಂಟೈನ್ ಅವಧಿ ಮುಗಿಸಿ ನಿಮ್ಮನ್ನು ಸೇರಲು ಬಹಳ ಉತ್ಸುಕತೆಯಿಂದ ಕಾಯುತ್ತಿದ್ದೇನೆ. ನಿಮ್ಮನ್ನು ಬಹುಬೇಗ ಸೇರಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಐಪಿಎಲ್‍ಗಾಗಿ ಯುಇಎಗೆ ಹೋಗಿರುವ ಜಿಂಟಾ ಅಲ್ಲಿ ಕ್ವಾಂರಟೈನ್ ಆಗಿದ್ದಾರೆ.

ಎಲ್ಲ ವಿಭಾಗದಲ್ಲೂ ಬಲಿಷ್ಠವಾಗಿ ಕಾಣುವ ಪಂಜಾಬ್ ತಂಡ ಮೊದಲ ಬಾರಿಗೆ ಟ್ರೋಫಿ ಗೆಲ್ಲಲು ಸಿದ್ಧತೆ ನಡೆಸಿದೆ. ಪಂಜಾಬ್ ತಂಡದಲ್ಲಿ ಈ ಬಾರಿ ಅತೀ ಹೆಚ್ಚು ಕನ್ನಡಿಗರೇ ಇದ್ದಾರೆ. ಅಶ್ವಿನ್ ಡೆಲ್ಲಿ ಕ್ಯಾಪಿಟಲ್ ತಂಡ ಸೇರಿದ ನಂತರ ತಂಡದ ನಾಯಕನ ಪಟ್ಟವನ್ನು ಕನ್ನಡಿಗ ಕೆ.ಎಲ್ ರಾಹುಲ್ ವಹಿಸಿಕೊಂಡಿದ್ದಾರೆ. ಜೊತೆಗೆ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ಅನಿಲ್ ಕುಂಬ್ಳೆ ಇದ್ದಾರೆ. ಉಳಿದಂತೆ ಕರ್ನಾಟಕದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಬೌಲರ್ ಸುಚಿತ್ ಸಹ ತಂಡದಲ್ಲಿ ಇದ್ದಾರೆ. ಇದನ್ನು ಓದಿ: ಐಪಿಎಲ್‍ನಲ್ಲಿ ಹೆಚ್ಚು ಇಂಡಿಯನ್ ಕೋಚ್‍ಗಳನ್ನು ನೋಡ ಬಯಸುತ್ತೇನೆ: ಅನಿಲ್ ಕುಂಬ್ಳೆ

ಕನ್ನಡಿಗರ ಜೊತೆ ವಿದೇಶಿ ಆಟಗಾರರಾಗಿ ಬ್ಯಾಂಟಿಂಗ್ ದೈತ್ಯ ಕ್ರಿಸ್ ಗೇಲ್, ವೆಸ್ಟ್ ಇಂಡೀಸ್‍ನ ನಿಕೋಲಸ್ ಪೂರನ್ ಮತ್ತು ಆಸ್ಟ್ರೇಲಿಯಾದ ಸ್ಫೋಟಕ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಇರಲಿದ್ದಾರೆ. ಇವರ ಜೊತೆಗೆ ಬೌಲಿಂಗ್ ನಲ್ಲಿ ಬಲ ತುಂಬಲು ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ, ವೆಸ್ಟ್ ಇಂಡೀಸ್‍ನ ಶೆಲ್ಡನ್ ಕಾಟ್ರೆಲ್ ಮತ್ತು ಮುಜೀಬ್-ಉರ್-ರೆಹ್ಮಾನ್ ಇದ್ದಾರೆ. ಪಂಜಾಬ್ ಸೆ. 20ರಂದು ದೆಹಲಿ ತಂಡದ ವಿರುದ್ಧ ಮೊದಲ ಪಂದ್ಯ ಆಡಲಿದೆ.

ಈ ಹಿಂದೆ ತಮ್ಮ ತಂಡದ ಬಗ್ಗೆ ಮಾತನಾಡಿದ ಮುಖ್ಯ ಕೋಚ್ ಅನಿಲ್ ಕುಂಬ್ಳೆಯವರು, ನಮ್ಮ ತಂಡ ಎಲ್ಲ ವಿಭಾಗದಲ್ಲೂ ಬಹಳ ಬಲಿಷ್ಠವಾಗಿದೆ. ಯುವ ಆಟಗಾರರು ಇದ್ದಾರೆ. ಪ್ರತಿಭಾನ್ವಿತ ವಿದೇಶಿ ಆಟಗಾರರು ಇದ್ದಾರೆ ಎಂದು ಹೇಳಿದ್ದರು. ಜೊತೆಗೆ 40 ವರ್ಷದ ಗೇಲ್ ಅವರು ತಂಡದಲ್ಲಿ ಆಡಲಿದ್ದು, ಅವರು ಓರ್ವ ಆಟಗಾರನ ಜೊತಗೆ ಹಿರಿಯ ಮಾರ್ಗದರ್ಶಕರಾಗಿಯೂ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ತಿಳಿಸಿದ್ದರು. ಇದನ್ನು ಓದಿ: ಕ್ಯಾಪ್ಟನ್ ತ್ರಯರಿಂದ ಸಾಕಷ್ಟು ಕಲ್ತಿದ್ದೇನೆ: ಕೆಎಲ್ ರಾಹುಲ್

ಪಂಜಾಬ್ ತಂಡದ ನಾಯಕತ್ವ ವಹಿಸಿಕೊಂಡಿರುವ ಬಗ್ಗೆ ಮಾತನಾಡಿದ್ದ ಕೆಎಲ್ ರಾಹುಲ್, ಧೋನಿ, ಕೊಹ್ಲಿ ರೋಹಿತ್ ಅವರೊಂದಿಗೆ ಕಳೆದ 10 ವರ್ಷಗಳಿಂದ ಆಡುತ್ತಿದ್ದು, ಅವರ ನಾಯಕತ್ವದಲ್ಲಿ ಆಡಲು ನನಗೆ ಅವಕಾಶ ಲಭಿಸಿದೆ. ಕೊಹ್ಲಿ, ಧೋನಿ ವ್ಯಕ್ತಿಗತವಾಗಿ ಭಿನ್ನವಾಗಿದ್ದರೂ, ತಂಡವನ್ನು ಮುನ್ನಡೆಸುವ ವಿಚಾರದಲ್ಲಿ ಒಂದೇ. ಆದರೆ ಆ ಪದ್ಧತಿಗಳು ಮಾತ್ರ ಬೇರೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಇತ್ತ ಸಾಕಷ್ಟು ಅನುಭವವನ್ನು ಹೊಂದಿರುವ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ತಂಡದ ಕೋಚ್ ಆಗಿ ತಮ್ಮ ಪಕ್ಕದಲ್ಲೇ ಇರುವುದು ಸಾಕಷ್ಟು ಸಂತಸ ತಂದಿದೆ ಎಂದಿದ್ದರು.

Click to comment

Leave a Reply

Your email address will not be published. Required fields are marked *