Connect with us

Crime

ವರದಕ್ಷಿಣೆ ತರುವಂತೆ ಕಿರುಕುಳ ನೀಡಿ 3 ಬಾರಿ ಭ್ರೂಣ ಹತ್ಯೆ

Published

on

ಹೈದರಾಬಾದ್: ಪತಿ ಹಾಗೂ ಆತನ ತಾಯಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಿ 3 ಬಾರಿ ಭ್ರೂಣ ಹತ್ಯೆ ಮಾಡಿಸಿದ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ.

ರಾಜೇಶ್ವರಿ (23) ಕಿರುಕುಳಕ್ಕೆ ಒಳಗಾದ ಮಹಿಳೆ. ರಾಜೇಶ್ವರಿ ಹಾಗೂ ಆಕೆಯ ಸಹೋದರ ಚಂದ್ರಶೇಖರ್ ವಿಶಾಖಪಟ್ಟಣದ ದಾಬಾ ಗಾರ್ಡನ್‍ನಲ್ಲಿರುವ ಪ್ರೇಮಾ ಸಮಾಜಂ ಅನಾಥಶ್ರಮದಲ್ಲಿ ಬೆಳೆದಿದ್ದರು. ರಾಜೇಶ್ವರಿ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ತನ್ನದೇ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು.

ರಾಜೇಶ್ವರಿ ಪತಿ ದಾಮೋದರ್ ಹಾಗೂ ಆತನ ತಾಯಿ ಲಲಿತಾ ತನ್ನ ಅಜ್ಜಿಯನ್ನು ನೋಡಲು ಅನಾಥಶ್ರಮಕ್ಕೆ ಹೋಗಿದ್ದರು. ಈ ವೇಳೆ ಅವರು ರಾಜೇಶ್ವರಿಯನ್ನು ನೋಡಿ ಮದುವೆ ಪ್ರಸ್ತಾಪವನ್ನು ಮಾಡಿದ್ದಾರೆ. ಆದರೆ ಮದುವೆಗೆ ಒಪ್ಪಿಗೆ ಇದೆ ಆದರೆ ವರದಕ್ಷಿಣೆ ನೀಡಲು ನನ್ನ ಬಳಿ ಹಣವಿಲ್ಲ ಎಂದು ರಾಜೇಶ್ವರಿ ಹೇಳಿದ್ದಳು. ಆಗ ದಾಮೋದರ್ ಹಾಗೂ ಆತನ ತಾಯಿ ನಮಗೆ ಯಾವುದೇ ಹಣ ಬೇಡ ಎಂದು ಹೇಳಿದ್ದರು. ಆದರೆ ಮದುವೆಯ ಸಮಯದಲ್ಲಿ ದಾಮೋದರ್ 1.5 ಲಕ್ಷ ರೂ. ಬೇಡಿಕೆ ಇಟ್ಟಿದ್ದಾನೆ. ರಾಜೇಶ್ವರಿ ಹಾಗೂ ಚಂದ್ರಶೇಖರ್ ಹೇಗೋ ಹಣ ಹೊಂದಿಸಿ ದಾಮೋದರ್ ಗೆ ನೀಡಿದ್ದರು.

ವರದಕ್ಷಿಣೆ ಕಿರುಕುಳ:
ಮದುವೆಯಾದ ಕೆಲವೇ ತಿಂಗಳಿನಲ್ಲಿ ದಾಮೋದರ್ ಹಾಗೂ ಆತನ ತಾಯಿ ರಾಜೇಶ್ವರಿಗೆ 25 ಲಕ್ಷ ರೂ. ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಶುರು ಮಾಡಿದ್ದರು. ಅಲ್ಲದೆ ಮದುವೆಯಾಗಿ 2 ವರ್ಷದಲ್ಲಿ ಮೂರು ಬಾರಿ ಭ್ರೂಣ ಹತ್ಯೆ ಮಾಡಿಸಿದ್ದಾರೆ. ದಾಮೋದರ್ ಹಾಗೂ ಲಲಿತಾ ದಿನನಿತ್ಯ ರಾಜೇಶ್ವರಿಗೆ ನಿಂದಿಸಿ ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ದಾಮೋದರ್ ಹಾಗೂ ಆತನ ತಾಯಿ ರಾಜೇಶ್ವರಿಯ ಬ್ಯೂಟಿ ಪಾರ್ಲರ್ ಮಾರಾಟ ಮಾಡಿ ಹೊಸ ಕಾರು ಕೂಡ ಖರೀದಿಸಿದ್ದರು.

ಮೊದಲ ಪತ್ನಿಯ ಕರೆ:
ರಾಜೇಶ್ವರಿ ಮತ್ತೆ ನಾಲ್ಕನೇ ಬಾರಿ ಗರ್ಭಿಣಿ ಆದಾಗ ದಾಮೋದರ್ ಮೊದಲ ಪತ್ನಿ ಸ್ವಾತಿ ಕರೆ ಮಾಡಿದ್ದಳು. ನೀನು ಈ ಮಗುವಿಗೆ ಜನ್ಮ ನೀಡಿದರೆ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಳು. ಆಗ ರಾಜೇಶ್ವರಿ ಮೊದಲ ಪತ್ನಿ ಬಗ್ಗೆ ದಾಮೋದರ್ ಬಳಿ ಕೇಳಿದ್ದಾಳೆ. ಇದರಿಂದ ಕೋಪಗೊಂಡ ದಾಮೋದರ್ ಆಕೆಯ ಮೇಲೆ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾನೆ. ಇದರಿಂದ ಬೇಸತ್ತ ರಾಜೇಶ್ವರಿ ಮನೆಯಿಂದ ಹೊರ ಬಂದು ಬೇರೆ ಕಡೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಳು.

ಕಾರಿನಲ್ಲಿ ಹಲ್ಲೆ:
ಮಂಗಳವಾರ ಮಧ್ಯಾಹ್ನ ದಾಮೋದರ್ 6 ತಿಂಗಳ ಗರ್ಭಿಣಿ ಪತ್ನಿ ರಾಜೇಶ್ವರಿಗೆ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾನೆ. ದಾರಿ ಮಧ್ಯೆ ಕಾರಿನಲ್ಲಿದ್ದ ಅತ್ತೆ ಲಲಿತಾ ರಾಜೇಶ್ವರಿ ಮೇಲೆ ಹಲ್ಲೆ ಮಾಡಿದ್ದಾಳೆ. ಲಲಿತಾ ಮೊದಲು ರಾಜೇಶ್ವರಿ ಹೊಟ್ಟೆ ಭಾಗಕ್ಕೆ ಹೊಡೆದಿದ್ದಾಳೆ. ಬಳಿಕ ದುಪ್ಪಟ್ಟಾದಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಿದ್ದಾಳೆ. ಅಲ್ಲದೆ ಇಬ್ಬರು ಚೂಪಾದ ವಸ್ತುವಿನಿಂದ ಆಕೆಯ ಕೈ ಮುರಿದು ಹಾಕಿದ್ದಾರೆ.

ರಾಜೇಶ್ವರಿ ತನ್ನ ಪತಿ ಹಾಗೂ ಅತ್ತೆಯಿಂದ ತಪ್ಪಿಸಿಕೊಂಡು ತನ್ನ ಸಹೋದರ ಚಂದ್ರಶೇಖರ್ ಬಳಿ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಇಬ್ಬರು ಪೆಂದೂರ್ತಿ ಪೊಲೀಸ್ ಠಾಣೆಗೆ ಹೋಗಿ ದಾಮೋದರ್ ಹಾಗೂ ಆತನ ತಾಯಿಯ ವಿರುದ್ಧ ದೂರು ನೀಡಿದ್ದಾರೆ. ರಾಜೇಶ್ವರಿ ಸ್ಥಿತಿ ನೋಡಿದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಾಗುವಂತೆ ಹೇಳಿದ್ದಾರೆ.