– ಯಾವ ರಾಜ್ಯಕ್ಕೂ ಮೋದಿ ಪರಿಹಾರ ಕೊಟ್ಟಿಲ್ಲ
ಮೈಸೂರು: ಯಾರೂ ಕಿಸೆಯಿಂದ ಪರಿಹಾರ ಕೊಡಲು ಆಗಲ್ಲ. ಯಾವ ರಾಜ್ಯಕ್ಕೂ ಪ್ರಧಾನಿ ಮೋದಿ ಪರಿಹಾರ ಕೊಟ್ಟಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಲು ಇಷ್ಟಪಡುತ್ತೇನೆ. ಕೇಂದ್ರ ಸರ್ಕಾರ ಪರಿಹಾರ ಕೊಡುವುದಿಲ್ಲ. ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ರೈತರಿಗೆ ಕೃಷಿ ಚಟುವಟಿಕೆ ತೊಂದರೆಯಾದರೆ ಮೊದಲಿನಿಂದ ಶುರು ಮಾಡುವುದಕ್ಕೆ ಕೊಡುವ ಸಹಾಯಧನವೇ ಹೊರತು ಪರಿಹಾರ ಅಲ್ಲ. ದೇಶಾದ್ಯಂತ ನೆರೆ ಬಂದಾಗ ಯಾವ ಸರ್ಕಾರ ಕೂಡ ಪರಿಹಾರ ಕೊಡುವುದಿಲ್ಲ. ಅವರು ಕೊಡುವುದು ಸಹಾಯಧನ. ಮೋದಿ ಅವರು ಕರ್ನಾಟಕದ ಮೇಲೆ ಬಹಳ ಪ್ರೀತಿ ಇಟ್ಟುಕೊಂಡು ಏನೇನು ಅನುದಾನ ಕೊಡಬೇಕಿತ್ತೋ ಆ ಅನುದಾನವನ್ನು ಕೊಟ್ಟಿದ್ದಾರೆ. ಎನ್ಡಿಆರ್ಎಫ್ ತಂಡ ಅನುದಾನವನ್ನು ಬಿಡುಗಡೆ ಮಾಡಬೇಕಿದೆ. ಅದಕ್ಕೆ ತಂಡ ಬಂದು ಪರಿಶೀಲನೆ ಮಾಡಿಕೊಂಡು ಹೋಗಿದೆ. ಪರಿಹಾರ ಎಂದಾಕ್ಷಣ ಯಾರೂ ಕಿಸೆಯಿಂದ ಪರಿಹಾರ ಕೊಡುವುದಲ್ಲ. ಅದಕ್ಕೆ ಅಂತಾನೇ ತುಂಬಾನೇ ಪ್ರಕ್ರಿಯೆಗಳು ಇರುತ್ತದೆ ಎಂದು ಹೇಳಿದರು.
2014ರಲ್ಲಿ ನಾವು 17 ಜನ ಸಂಸದರಾಗಿ ಗದ್ದಿದ್ದೇವೆ. ಆಗ ಕಾವೇರಿ, ಮೇಕೆದಾಟು ಸಮಸ್ಯೆ ಇತ್ತು. ಆ ಸಂದರ್ಭದಲ್ಲಿ 17 ಜನ ಸಂಸದರು ಏನು ಮಾಡುತ್ತಿದ್ದಾರೆ ಎಂದು ಕೇಳುತ್ತಿದ್ದರು. 2019ರಲ್ಲಿ 17 ಸಂಸದರನ್ನು ಪುನಃ ಆಯ್ಕೆ ಮಾಡುವ ಜೊತೆಗೆ 25ಕ್ಕೆ ನಮ್ಮ ಸಂಖ್ಯೆಯನ್ನು ಹೆಚ್ಚಿಸಿದ್ದರು. ಅಂದರೆ ಕರ್ನಾಟಕದ ಬಿಜೆಪಿ ಸಂಸದರು ಕೆಲಸ ಮಾಡುತ್ತಿದ್ದಾರೆ, ಜನರಿಗೆ ಅದರ ಮೆಚ್ಚುಗೆ ಹಾಗೂ ಮನ್ನಣೆ ಸಿಕ್ಕಿದೆ ಎಂದರ್ಥ ಎಂದರು.
ಟೀಕೆ ಮಾಡುವರಿಗೆ ನಾನು ಒಂದು ಪ್ರಶ್ನೆ ಕೇಳುತ್ತೇನೆ. ಮೋದಿ ಬಿಹಾರಕ್ಕೆ ಪರಿಹಾರ ನೀಡಿರುವ ಕುರಿತು ಟ್ವೀಟ್ ಮಾಡಿದ್ದಾರೆ ಎಂದು ಹೇಳುತ್ತೀರಾ, ಆದರೆ ಮೋದಿ ಅವರು ಕರ್ನಾಟಕಕ್ಕೆ ಅಮಿತ್ ಶಾ ಅವರನ್ನು ಕಳುಹಿಸಿಕೊಟ್ಟಿದ್ದರು. ಇದು ನಿಮಗೆ ಕಣ್ಣಿಗೆ ಕಾಣಿಸುವುದಿಲ್ಲವಾ. ಅಮಿತ್ ಶಾ ಅವರು ಸ್ವತಃ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ಮಾಡಿಕೊಂಡು ಹೋಗಿದ್ದಾರೆ. ಎಲ್ಲರು ಕೂಡ ಕೇಂದ್ರ ಸರ್ಕಾರ ಎಂದು ಕೇಳುತ್ತೀರಾ ಅಲ್ಲವಾ, ಈಗ ರಾಜ್ಯಾದ್ಯಂತ 2,35,000 ಮನೆಗಳು ಹಾನಿಯಾಗಿದೆ. ಯಾರ ಮನೆಗೆ ನೀರು ನುಗ್ಗಿದೆಯೋ ಅವರಿಗೆ 10,000 ನೀಡಲಾಗಿದೆ. ಅಂದರೆ ಮೋದಿ ಸರ್ಕಾರದಿಂದ 3,800 ಹಾಗೂ ಯಡಿಯೂರಪ್ಪ ಸರ್ಕಾರದಿಂದ 6,200 ರೂ. ನೀಡಿದ್ದೇವೆ. ಯಾರ ಮನೆಗೆ ಬಂದಿಲ್ಲ ಎಂದರೆ ಹೇಳಿ ನಾವೇ ಖುದ್ದಾಗಿ ಬಂದು ಅವರಿಗೆ ಹಣ ನೀಡುತ್ತೇವೆ. ಇದುವರೆಗೂ ಕರ್ನಾಟಕದಲ್ಲಿ ಯಾವ ಸಿಎಂ ಕೂಡ ಕೇಂದ್ರ ಸರ್ಕಾರ ನೀಡುವ 3,800 ರೂ.ಗೆ 6,200 ರೂ. ಸೇರಿಸಿ ಕೊಡುವ ಕೆಲಸ ಮಾಡಿದ್ದಾರಾ. ಅದು ನಮ್ಮ ಯಡಿಯೂರಪ್ಪ ಅವರು ಮಾಡಿದ್ದಾರೆ ಎಂದರು.
ಮಾಧ್ಯಮಗಳಿಗೆ ಚಾಲೆಂಜ್:
ಇದೇ ವೇಳೆ ಮಾಧ್ಯಮಗಳಿಗೆ ಚಾಲೆಂಜ್ ಹಾಕಿದ ಪ್ರತಾಪ್ ಸಿಂಹ, ಯಾವುದಾದರೂ ಮನೆಗೆ ನೀರು ನುಗ್ಗಿ ಪಾತ್ರೆಗಳು ಹಾಳಾಗಿದ್ದರೆ ಹೇಳಿ ನಾವೇ ಅವರ ಮನೆಗೆ ಹೋಗಿ 10 ಸಾವಿರ ರೂ. ನೀಡುತ್ತೇವೆ. ಯಾರ ಮನೆ ಹಾನಿಯಾಗಿದೆಯೋ ಅವರಿಗೆ ತಕ್ಷಣಕ್ಕೆ ಎನ್ಡಿಆರ್ಎಫ್ ತಂಡದಿಂದ 95,000 ರೂ. ವರೆಗೂ ಕೊಡುವ ಅನುದಾನ ಇದೆ. ಇದು ರಾಜ್ಯಾದ್ಯಂತ ಅದನ್ನು ಕೊಟ್ಟಿದ್ದೇವೆ. ಅಲ್ಲದೆ ಯಡಿಯೂರಪ್ಪ ಅವರು ಯಾರ ಮನೆ ಸಂಪೂರ್ಣವಾಗಿ ಹಾಳಾಗಿದೆಯೋ ಅವರಿಗೆ ನೀವು ಬಯಸಿದ ಜಾಗದಲ್ಲಿ ಮನೆ ಕಟ್ಟಿಸಿಕೊಳ್ಳುವುದಕ್ಕೆ 5 ಲಕ್ಷ ರೂ. ಕೊಡುತ್ತೇನೆ ಎಂದರು. ಅಂದರೆ ಕೇಂದ್ರ ಸರ್ಕಾರದಿಂದ 95,000 ಹಾಗೂ ಯಡಿಯೂರಪ್ಪ ಸರ್ಕಾರದಿಂದ 4,50,000 ಸೇರಿಸಿ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
2004ರಿಂದ 2014ರವರೆಗೂ ನೆರೆನೂ ಬಂದಿತ್ತು ಹಾಗೂ ಬರನೂ ಬಂದಿತ್ತು. ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. 2004ರಿಂದ 2014ರವರೆಗೂ 10 ವರ್ಷಗಳಲ್ಲಿ ಯುಪಿಎ ಸರ್ಕಾರ ಎನ್ಡಿಆರ್ಎಫ್ಗೆ ಎಷ್ಟು ಅನುದಾನ ಕೊಟ್ಟಿದ್ದರೋ ಅದಕ್ಕಿಂತ ಮೂರು ಪಟ್ಟು ಹೆಚ್ಚು ಮೋದಿ ಸರ್ಕಾರ 2014ರಿಂದ 2019ರವರೆಗೆ ಕೊಟ್ಟಿದೆ. ಈಗಲೂ ನಾವು ಕೊಡುತ್ತೇವೆ. ಮೇ, ಜೂನ್, ಜುಲೈನಲ್ಲಿ ಬರ ಬಂದಿದೆ ಎಂದು ಹೇಳುತ್ತಿದ್ದರು. ಬರದ ಬಗ್ಗೆ ಪರಿಶೀಲನೆ ಮಾಡಿ ಹೆಚ್ಚಿನ ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಪೋಷಿಸಿ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಿದ್ದೆವು. ವರದಿ ಕಳುಹಿಸಿದಾಗ ಇದೇ ಅಗಸ್ಟ್ ತಿಂಗಳಿನಲ್ಲಿ ಸಾವಿರ ಎಂಟು ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.