Connect with us

Bengaluru City

ಜಮೀರ್ ಅನುಮಾನಾಸ್ಪದ ನಡೆಯ ವಿರುದ್ಧ ತನಿಖೆ ನಡೆಸಿ – ದಾಖಲೆಯೊಂದಿಗೆ ಸಿಎಂಗೆ ಸಂಬರಗಿ ದೂರು

Published

on

ಬೆಂಗಳೂರು: ಮಾಜಿ ಮಂತ್ರಿ, ಚಾಮರಾಜಪೇಟೆಯ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ವಿರುದ್ಧ ದೂರು ನೀಡಿ ತನಿಖೆ ನಡೆಸಬೇಕೆಂದು ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಮುಖ್ಯಮಂತ್ರಿ ಯಡಿಯೂರಪ್ಪನವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇಂದು ವಿಧಾನ ಸೌಧಕ್ಕೆ ಯಡಿಯೂರಪ್ಪನವರನ್ನು ಭೇಟಿಯಾಗಲು ಸಂಬರಗಿ ಬಂದಿದ್ದರು. ಆದರೆ ಅವರ ಭೇಟಿಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಯಡಿಯೂರಪ್ಪನವರಿಗೆ ಕಾರಿಡರ್‌ನಲ್ಲಿ ದೂರು ನೀಡಿದರು. ಸಂಬರಗಿ ದೂರಿಗೆ ಸಿಎಂ ತಲೆಯಾಡಿಸಿ ಹೊರಟು ಹೋದರು.

ಬಳಿಕ ಮಾತನಾಡಿದ ಸಂಬರಗಿ, ಶಾಸಕ ಜಮೀರ್ ಅಹಮದ್ ಕಾನೂನು ಬಾಹಿರವಾದ ಪ್ರಯಾಣ ಮಾಡಿದ್ದಾರೆ. ಶಿಷ್ಟಾಚಾರದ ಪ್ರಕಾರ ಯಾವುದೇ ದಾಖಲೆ ಕೊಟ್ಟಿಲ್ಲ. ಆ ಬಗ್ಗೆ ಸಿಎಂಗೆ ದೂರು‌ ನೀಡಿದ್ದೇನೆ ಎಂದು ತಿಳಿಸಿದರು.

ದೂರಿನ ಪತ್ರದಲ್ಲಿ ಏನಿದೆ?
ಪ್ರಶಾಂತ್ ಸಂಬರಗಿ ಆದ ನಾನು, ಒಬ್ಬ ಉದ್ಯಮಿಯಾಗಿ ಮತ್ತು ಜವಾಬ್ದಾರಿಯುತ ನಾಗರೀಕನಾಗಿ ಹಲವು ವರ್ಷಗಳಿಂದ ಸಮಾಜ ಸೇವೆ ಮತ್ತು ಸಾರ್ವಜನಿಕ ಜೀವನದಲ್ಲಿದ್ದೇನೆ. ಇತ್ತೀಚೆಗೆ ಡ್ರಗ್ಸ್ ದಂಧೆಗೂ ಕನ್ನಡ ಚಿತ್ರರಂಗಕ್ಕೂ ಇರುವ ಲಿಂಕ್ ಅನ್ನು ಬಯಲಿಗೆಳೆದಿದ್ದೇನೆ.

ಈ ಪತ್ರದ ಮೂಲಕ ನಾನು, ಕಾಂಗ್ರೆಸ್​ನ ಶಾಸಕ ಮತ್ತು ಮಾಜಿ ಸಚಿವರೊಬ್ಬರು ಗಂಭೀರವಾದ ಮತ್ತು ಅಪಾಯಕಾರಿಯಾದ ನಡೆಯ ಬಗ್ಗೆ ನಿಮ್ಮ ಗಮನಕ್ಕೆ ತರಲು ನಾನು ಬಯಸುತ್ತೇನೆ.

ನಿಮಗೂ ಗೊತ್ತಿರಬಹುದು. ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿಗಳ ನಡಾವಳಿ ಮತ್ತು ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ನಿಯಮಗಳ ಪ್ರಕಾರ ಯಾವುದೇ ಸಚಿವರು ಅಥವಾ ಶಾಸಕರು ವಿದೇಶ ಪ್ರವಾಸಕ್ಕೆ ಹೋಗುವ ಮುನ್ನ ಮುಖ್ಯ ಕಾರ್ಯದರ್ಶಿಗಳು ಅಥವಾ ಮುಖ್ಯಮಂತ್ರಿಗಳ ಕಚೇರಿಯಿಂದ ಅಥವಾ ರಾಜ್ಯ ಶಿಷ್ಟಾಚಾರ ಅಧಿಕಾರಿಯ ಅನುಮತಿ ಪಡೆದುಕೊಳ್ಳಬೇಕು.

ಈ ವಿಚಾರವಾಗಿ ಚಾಮರಾಜಪೇಟೆಯ ಹಾಲಿ ಶಾಸಕ ಮತ್ತು ಮಾಜಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಕಳೆದ ಐದು ವರ್ಷಗಳಲ್ಲಿ ಹಲವು ವಿದೇಶಿ ಪ್ರವಾಸಗಳನ್ನ ಮಾಡಿದ್ದಾರೆ. ಆದರೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ. ಯಾವುದೇ ವಿದೇಶ ಪ್ರವಾಸಕ್ಕೂ ಜಮೀರ್ ಅಹಮದ್ ಖಾನ್ ಅನುಮತಿಯನ್ನು ಪಡೆದುಕೊಂಡಿಲ್ಲ.

ಜಮೀರ್ ಅಹಮದ್ ಖಾನ್ ಅವರು ಕೇವಲ ಶಾಸಕರಲ್ಲ. 2018 ಜೂನ್ 6 ರಿಂದ 2019 ಜುಲೈ 9 ರ ವರೆಗೆ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಆಹಾರ ಮತ್ತು ನಾಗರೀಕ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿಯೂ ಕಾರ್ಯನಿರ್ವಹಣೆ ಮಾಡಿದ್ದಾರೆ.

ಈ ಮೂಲಕ ನಾನು ನಿಮ್ಮ ಗಮನಕ್ಕೆ ತರುವುದೇನೆಂದರೆ, ಜಮೀರ್ ಅಹಮದ್ ಖಾನ್ ಅವರು 2019ರ ಜೂನ್ 8 ರಿಂದ 10 ರ ವರೆಗೆ ವಿದೇಶ ಪ್ರವಾಸ ಮಾಡಿರುತ್ತಾರೆ. ಯಾಕೆ ಅವರು ಈ ಪ್ರವಾಸದ ವಿಚಾರವನ್ನ ಸಂಬಂಧಿತ ಅಧಿಕಾರಿಗಳಿಂದ ಮುಚ್ಚಿಟ್ಟಿದ್ದಾರೆ ಎನ್ನುವುದಕ್ಕೆ ಸ್ಪಷ್ಟತೆಯಿಲ್ಲ. ನಿಮಗೆ ಗೊತ್ತಿರಬಹುದು ಇತ್ತೀಚೆಗೆ ಜಮೀರ್ ಅಹಮದ್ ಅವರ ಹೆಸರು ಕನ್ನಡ ಮಾಧ್ಯಮಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ.

ಇತ್ತೀಚಿನ ಅಂತಾರಾಷ್ಟ್ರೀಯ ತನಿಖಾ ಏಜೆನ್ಸಿಯ ವರದಿಯೊಂದು ಬಹಿರಂಗಪಡಿಸಿರುವಂತೆ, ಚೀನಾ 10 ಸಾವಿರಕ್ಕೂ ಹೆಚ್ಚು ಭಾರತೀಯರ ಮೇಲೆ ಗೂಡಾಚಾರಿಕೆ ಮಾಡುತ್ತಿದೆ. ಇಂಥಾ ಸಂದರ್ಭದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾಗಿ ಕಾನೂನು ಪಾಲನೆ ಮಾಡಬೇಕಾಗಿದ್ದ ಜಮೀರ್ ಅಹಮದ್ ಖಾನ್ ಅವರು ತಮ್ಮ ವಿದೇಶಿ ಪ್ರವಾಸಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ. ಇದು ಅವರ ಉದ್ದೇಶಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುವಂತೆ ಮಾಡುತ್ತಿದೆ.

ಈ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ನಾಗರೀಕನಾಗಿ ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜಮೀರ್ ಅಹಮದ್ ಖಾನ್ ಅವರ ಅನುಮಾನಾಸ್ಪದ ನಡೆಯ ವಿರುದ್ಧ ತನಿಖೆ ಮಾಡಬೇಕೆಂದು ಮನವಿಮಾಡಿಕೊಳ್ಳುತ್ತೇನೆ.

ಈ ಪತ್ರದೊಂದಿಗೆ ಅಗತ್ಯ ದಾಖಲೆಗಳನ್ನು ನಾನು ನಿಮ್ಮ ಗಮನಕ್ಕೆಂದು ಲಗತ್ತಿಸಿರುತ್ತೇನೆ.

Click to comment

Leave a Reply

Your email address will not be published. Required fields are marked *