Tuesday, 21st May 2019

Recent News

ಸಾಹಿತಿಗಳಿಗೆ ಓದೋಕೆ ಬರೆಯೋಕೆ ಬಿಟ್ರೆ ಬೇರೇನೂ ಗೊತ್ತಿಲ್ಲ: ರಂಗಕರ್ಮಿ ಪ್ರಕಾಶ್ ಬೆಳವಾಡಿ

ಬೆಂಗಳೂರು: ಹಿರಿಯ ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರ ಸಂದರ್ಶನದ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಪ್ರಕಾಶ್ ಬೆಳವಾಡಿ, ಸಾಹಿತಿಗಳು ಅನಾವಶ್ಯಕವಾಗಿ ಮಾತನಾಡೋದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಯಾವುದೇ ಸರ್ಕಾರಿ ಕಚೇರಿಗಳಿಗೆ ಹೋದ್ರೆ ಎಲ್ಲ ಕಡೆಯೂ ಸಾಹಿತಿಗಳ ಫೋಟೋ ಹಾಕಿರುತ್ತಾರೆ. ರಾಜ್ಯದ ದೊಡ್ಡ ಎಂಜಿನಿಯರ್ ಗಳು, ಸಂಶೋಧನಕಾರರು ಮತ್ತು ವೈದ್ಯರು, ದೊಡ್ಡ ರೈತರ ಫೋಟೋಗಳು ಎಲ್ಲಿಯೂ ಕಾಣುವುದಿಲ್ಲ. ಮಹಾನ್ ಸಾಧನೆ ಮಾಡಿದವರಿಗೆ ಕರ್ನಾಟಕದಲ್ಲಿ ಗೌರವ ಇಲ್ಲ. ದೊಡ್ಡ ಬಾಯಿಯುಳ್ಳ ಸಾಹಿತಿಗಳನ್ನು ಎಲ್ಲಾ ಕಾರ್ಯಕ್ರಮಗಳಿಗೂ ಕರೆದುಕೊಂಡು ಬರುತ್ತಾರೆ. ದೊಡ್ಡ ಸಾಹಿತಿಗಳಿಗೆ ಬದನೆಕಾಯಿ ಹೇಗೆ ಬೆಳೆಯುತ್ತಾರೆ ಎಂಬುದೇ ಗೊತ್ತಿಲ್ಲ. ಸಾಹಿತಿಗಳಿಗೆ ಓದೋಕೆ ಬರೆಯೋಕೆ ಬಿಟ್ರೆ ಏನೂ ಗೊತ್ತಿಲ್ಲ ಎಂದು ಪ್ರಕಾಶ್ ಬೆಳವಾಡಿ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರಿಗೆ ಗೊತ್ತಿರುವಷ್ಟು ಕರ್ನಾಟಕದ ಮಾಹಿತಿ ಬೇರೆ ಯಾವ ಸಾಹಿತಿಗಳಿಗೂ ತಿಳಿದಿರಲ್ಲ. ಅವರಿಗೆ ಕುಡಿಯುವ ನೀರಿನ ಬೆಲೆ ಗೊತ್ತಿಲ್ಲ. ಯಾವ ಪರಿಸರಕ್ಕೆ ಯಾವ ಬೆಳೆ ಬೆಳೆಯಬೇಕು ಎಂಬುದು ಗೊತ್ತಿಲ್ಲ. ಬದಲಾಗುತ್ತಿರುವ ಜಗತ್ತಿನ ಆಧುನಿಕ ತಂತ್ರಜ್ಞಾನದ ಮಾಹಿತಿ ಅವರಿಗೆ ಗೊತ್ತಿರಲ್ಲ. ಬೆಂಗಳೂರಲ್ಲಿ ರಾಕೆಟ್ ಸೈನ್ಸ್ ಇದೆ. ಆದ್ರೆ ಎಲ್ಲಿಯೂ ಒಬ್ಬ ರಾಕೆಟ್ ವಿಜ್ಞಾನಿಯ ಫೋಟೋವನ್ನು ನಾವು ಕಾಣುವುದಿಲ್ಲ. ಒಂದು ವೇಳೆ ನಾವು ಸಾಹಿತಿಗಳ ಬಳಿ ನಮ್ಮ ಮಕ್ಕಳನ್ನು ಟ್ಯೂಶನ್ ಗೆ ಕಳಿಸಿದ್ರೆ ಅವರನ್ನ ನಾಶ ಮಾಡ್ತಾರೆ. ಎಲ್ಲಾದ್ರೂ ಹೋಗುವಾಗ ಕಾರ್ ಟಯರ್ ಪಂಚರ್ ಆದ್ರೆ ಅದನ್ನ ಹೇಗೆ ರಿಪೇರಿ ಮಾಡಬೇಕು ಎನ್ನುವ ವಿಚಾರವೂ ಗೊತ್ತಿರಲ್ಲ ಎಂದು ಅವರು ಸಾಹಿತಿಗಳನ್ನು ಟೀಕಿಸಿದ್ದಾರೆ.

ಮನೆಯಲ್ಲಿ ಒಂದು ವಿದ್ಯುತ್ ಸ್ವಿಚ್ ಹೋದರೆ ಅದನ್ನು ರಿಪೇರಿ ಮಾಡುವ ಬದಲು ದೇಶದ ಆರ್ಥಿಕ ಸ್ಥಿತಿ ಎಲ್ಲಿಗೆ ಬಂತು. ಮೋದಿಯವರ ಆರ್ಥಿಕ ನೀತಿ ಎಲ್ಲಿಗೆ ಬಂದಿದೆ ಎಂಬ ದೊಡ್ಡ ಲೇಖನಗಳನ್ನು ಬರೆಯುತ್ತಾರೆ. ಮನೆಯಲ್ಲಿ ಎಂಜಿನಿಯರ್ ಓದಿರುವ ಮಗನಿದ್ರೂ, ಅವನ ತಲೆಯಲ್ಲಿ ಎಡ, ಬಲ ಅಂತಾ ಉಪದೇಶ ಮಾಡಿದ್ದರಿಂದ ಆತನೂ ರಿಪೇರಿ ಮಾಡೋದಕ್ಕೆ ಹೋಗಲ್ಲ ಎಂದು ವ್ಯಂಗ್ಯವಾಡಿದ್ರು.

ಓದೋದು ನಿಮ್ಮ ಕೆಲಸವಾಗಿದ್ದು, ರಾಜ್ಯಕ್ಕೆ ಹಿತವಾದದನ್ನು ಓದಿ ತಿಳಿದುಕೊಂಡು ನಮಗೂ ಹೇಳಿಕೊಡಿ. ಕರ್ನಾಟಕ ನೈಸರ್ಗಿಕ ಸಂಪತ್ತಿನಿಂದ ಭರಪೂರವಾಗಿದೆ. ಎಲ್ಲಿ ಯಾವ ಉದ್ಯಮ ಆರಂಭಿಸಬೇಕು. ಪರಿಸರಕ್ಕನುಗುಣವಾಗಿ ಕೃಷಿ ಚಟುವಟಿಕೆ ಹೇಗೆ ನಡೆಸಬೇಕು ಎಂಬುದರ ಕುರಿತಾದ ವಿಶೇಷ ಮಾಹಿತಿಗಳನ್ನು ಕಲೆ ಹಾಕಿ ರಾಜ್ಯದ ಜನತೆಗೆ ಮಾರ್ಗದರ್ಶನ ನೀಡಿ. ಐದು ವರ್ಷ ಸುಮ್ಮನಿದ್ದು, ಎಲ್ಲ ವಲಯಗಳ ಮಾಹಿತಿಯನ್ನು ಪಡೆದುಕೊಳ್ಳಬೇಕು. ಸೈನ್ಸ್ ಬಗ್ಗೆ ಜ್ಞಾನ ಇದ್ದವನು ಸಂಶೋಧನೆ, ಎಂಜಿನಿಯರ್, ಮೆಡಿಕಲ್ ವಿಭಾಗಕ್ಕೆ ಸೇರುವುದು. ಕಾಮರ್ಸ್ ಬಗೆಗೆ ಆಸಕ್ತಿಯುಳ್ಳವರು ಮಾರುಕಟ್ಟೆ, ಹಣಕಾಸಿನ ವ್ಯವಹಾರ, ಬ್ಯಾಂಕಿಂಗ್ ವಲಯ ಆಯ್ದುಕೊಳ್ಳುವುದು. ಯಾವ ವಿಷಯ ಗೊತ್ತಿಲ್ಲದವನು ಸಾಹಿತಿ ಆಗುತ್ತಾನೆ ಎಂಬ ತಪ್ಪು ಪರಿಕಲ್ಪನೆ ಬದಲಾಗಬೇಕಿದೆ ಎಂಬ ಆಶಯವನ್ನು ಪ್ರಕಾಶ್ ಬೆಳವಾಡಿ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply

Your email address will not be published. Required fields are marked *