ವಿಐಪಿ ಸೆಲ್‌ನಿಂದ ಪ್ರಜ್ವಲ್‌ ಎತ್ತಂಗಡಿ; ಜೈಲಲ್ಲಿ ಸಿಕ್ಕ ಮೊಬೈಲ್‌ನಲ್ಲೂ ಅಶ್ಲೀಲ ವಿಡಿಯೋಗಳು ಪತ್ತೆ

By
1 Min Read

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣ (Prajwal Revanna) ಸೆಲ್‌ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ.

ಮೊಬೈಲ್‌ ಪತ್ತೆಯಾದ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ವಿಐಪಿ ಸೆಲ್‌ನಿಂದ (VIP Cell) ಪ್ರಜ್ವಲ್‌ ರೇವಣ್ಣನನ್ನ ಜನರಲ್‌ ಕೈದಿಗಳಿರುವ ಸೆಲ್‌ಗೆ ಎತ್ತಂಗಡಿ ಮಾಡಲಾಗಿದೆ. 20 ಕೈದಿಗಳಿರುವ ಬ್ಯಾರಕ್‌ಗೆ ಪ್ರಜ್ವಲ್‌ ರೇವಣ್ಣನನ್ನ ಶಿಫ್ಟ್‌ ಮಾಡಲಾಗಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

90 ಅಶ್ಲೀಲ ವಿಡಿಯೋಗಳು ಪತ್ತೆ
ಇನ್ನೂ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಸಿಕ್ಕ ಮೊಬೈಲ್‌ನಲ್ಲಿ ಸುಮಾರು 90 ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಹಾಗೇ ಪ್ರಜ್ವಲ್ ಪರಿಚಿತರೊಂದಿಗೆ ಮಾತನಾಡಿದ ಆಡೀಯೋ ರೆಕಾರ್ಡ್ ಸಹ ಸಿಕ್ಕಿದೆ. ಜೈಲಿನಲ್ಲಿ ಸಿಕ್ಕ ಮೊಬೈಲ್ ಮೂಲಕ ಪ್ರಜ್ವಲ್ ರೇವಣ್ಣ ಅಪರಿಚಿತ ವ್ಯಕ್ತಿಯೊಂದಿಗಿನ ಸಂಭಾಷಣೆ ಸಿಕ್ಕಿದೆ. ಇನ್ನು ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣ ಜೈಲಿನ ಕೊಠಡಿಯೊಳಗೆ ವೈಯಕ್ತಿಕ ಉಡುಪು ಧರಿಸಿ, ಜೈಲು ಸಮವಸ್ತ್ರವಿಲ್ಲದೇ ಆರಾಮವಾಗಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ.

ಈ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ನಿನ್ನೆ ಸಿಸಿಬಿ ಅಧಿಕಾರಿಗಳು ಜೈಲು ಕೊಠಡಿಯ ಮೇಲೆ ದಾಳಿ ನಡೆಸಿದಾಗ, ಒಂದು ಮೊಬೈಲ್ ಫೋನ್ ಪತ್ತೆಯಾಗಿತ್ತು. ವಿಡಿಯೋ ಬಹಿರಂಗವಾದ ಬೆನ್ನಲ್ಲೇ ಜೈಲು ಆಡಳಿತದ ಭದ್ರತಾ ವ್ಯವಸ್ಥೆ ಹಾಗೂ ನಿಯಮಗಳ ಪಾಲನೆ ಕುರಿತು ಹಲವು ಪ್ರಶ್ನೆಗಳು ಎದ್ದಿವೆ.

Share This Article
Exit mobile version