Connect with us

Bengaluru City

ಅಭಿಮಾನಿಗಳಿಗೆ ಪ್ರಜ್ವಲ್ ದೇವರಾಜ್ ಸಿಹಿ ಸುದ್ದಿ

Published

on

ಬೆಂಗಳೂರು: ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ಮನರಂಜನೆ ನೀಡಲು ಮತ್ತೊಂದು ಸಿನಿಮಾ ತೆರೆಗೆ ಬರುತ್ತಿರುವುದನ್ನು ಖಚಿತಪಡಿಸಿದ್ದಾರೆ.

ನಟ ಪ್ರಜ್ವಲ್ ದೇವರಾಜ್ ಅಭಿನಯದ ಇನ್‍ಸ್ಪೆಕ್ಟರ್ ವಿಕ್ರಮ್ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದ್ದು, ಕೊರೊನಾ ಬಳಿಕ ಮತ್ತೊಂದು ಸಿನಿಮಾ ತೆರೆಗೆ ಅಪ್ಪಳಿಸುತ್ತಿದೆ. ಈಗಾಗಲೇ ಹಲವು ಸಿನಿಮಾಗಳು ತೆರೆ ಕಂಡಿದ್ದು, ಇದೀಗ ಇನ್‍ಸ್ಪೆಕ್ಟರ್ ವಿಕ್ರಮ್ ಮೂಲಕ ಪ್ರಜ್ವಲ್ ದೇವರಾಜ್ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಫೆಬ್ರವರಿ 5ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ನಿರ್ದೇಶಕ ಶ್ರೀನರಸಿಂಹ ಸಾಮಾಜಿಕ ಜಾಲತಾಣಗಳ ಮೂಲಕ ಈ ಕುರಿತು ಸ್ಪಷ್ಟಪಡಿಸಿದ್ದಾರೆ. ಮೂರು ವರ್ಷಗಳಿಂದ ಇನ್‍ಸ್ಪೆಕ್ಟರ್ ವಿಕ್ರಮ್ ಚಿತ್ರವನ್ನು ತಯಾರಿಸಲಾಗಿದ್ದು, ಇದೀಗ ಬಿಡುಗಡೆ ಭಾಗ್ಯ ಸಿಕ್ಕಿದೆ. ಕೊರೊನಾದಿಂದಾಗಿ ಸ್ಯಾಂಡಲ್‍ವುಡ್ ಹಲವು ಸಿನಿಮಾಗಳ ಬಿಡುಗಡೆ ತಡವಾಗಿದ್ದು, ಇನ್‍ಸ್ಪೆಕ್ಟರ್ ವಿಕ್ರಮ್ ಸಹ ತಡವಾಗಿ ತೆರೆಗೆ ಅಪ್ಪಳಿಸುತ್ತಿದೆ.

ಚಿತ್ರದಲ್ಲಿ ಭಾವನಾ ಮೆನನ್, ರಘು ಮುಖರ್ಜಿ ಹಾಗೂ ಅತಿಥಿ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀನರಸಿಂಹ ಚಿತ್ರ ನಿರ್ದೇಶಿಸಿದ್ದು, ವಿಖ್ಯಾತ್ ಎ.ಆರ್. ನಿರ್ಮಿಸಿದ್ದಾರೆ.

ಮತ್ತೊಂದೆಡೆ ಪ್ರಜ್ವಲ್ ದೇವರಾಜ್ ಈಗಾಗಲೇ ಹಲವು ದೊಡ್ಡ ಪ್ರಾಜೆಕ್ಟ್‍ಗಳಲ್ಲಿ ಬ್ಯುಸಿಯಾಗಿದ್ದು, ಶೀಘ್ರವೇ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಸದ್ಯ ಅರ್ಜುನ್ ಗೌಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪ್ರಜ್ವಲ್, ಕಿಕ್ ಬಾಕ್ಸರ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಇದೇ ವೇಳೆ ವೀರಂ ಸಿನಿಮಾ ಚಿತ್ರೀಕರಣಕ್ಕೆ ಸಹ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಶೀಘ್ರ ಸೆಟ್ಟೇರಲಿದೆ. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಪ್ರಜ್ವಲ್ ದೇವರಾಜ್ ತೊಡಗಿಸಿಕೊಂಡಿದ್ದಾರೆ.

ಇದೆಲ್ಲದರ ನಡುವೆ ಪಿ.ಸಿ.ಶಂಕರ್ ಅವರ ಇನ್ನೂ ಹೆಸರಿಡದ ಥ್ರಿಲ್ಲರ್ ಚಿತ್ರ ಸಹ ಸಾಲಿನಲ್ಲಿದೆ. ಹೀಗಾಗಿ ಪ್ರಜ್ವಲ್ ದೇವರಾಜ್ ಅವರಿಗೆ 2021 ಸಖತ್ ಬ್ಯುಸಿ, ಹಾರ್ಡ್ ವರ್ಕ್ ಮಾಡುವ ವರ್ಷವಾಗಿದೆ ಎಂದರೆ ತಪ್ಪಾಗಲಾರದು. ಜೆಂಟಲ್‍ಮೆನ್ ಸಕ್ಸಸ್ ಬಳಿಕ ಇದೀಗ ಇನ್‍ಸ್ಪೆಕ್ಟರ್ ವಿಕ್ರಂ ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿದ್ದು, ಯಾವ ರೀತಿ ಮೂಡಿ ಬರಲಿದೆ ಕಾದು ನೋಡಬೇಕಿದೆ.

Click to comment

Leave a Reply

Your email address will not be published. Required fields are marked *