Tuesday, 25th February 2020

ಬಾಹುಬಲಿ ನಂತ್ರ ಸಾಹೋ ಒಪ್ಪಿಕೊಂಡ ಕಥೆ ವಿವರಿಸಿದ ಪ್ರಭಾಸ್

ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ ತಮ್ಮ ಮುಂಬರುವ ‘ಸಾಹೋ’ ಚಿತ್ರದ ಪ್ರಮೋಶನ್‍ಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಮಾತು ಶುರು ಮಾಡಿದ ಅವರು, ನಿಮಗೆ ಸಾಹೋ ಟ್ರೈಲರ್ ಇಷ್ಟ ಆಗಿದೆ ಎಂದುಕೊಂಡಿದ್ದೇನೆ. ಕರ್ನಾಟಕದ ಜನತೆ ಬಾಹುಬಲಿ ಚಿತ್ರಕ್ಕೆ ತುಂಬಾ ಪ್ರೀತಿ ನೀಡಿದ್ದೀರಿ. ಅದಕ್ಕಾಗಿ ನಾನು ಧನ್ಯವಾದ ತಿಳಿಸುತ್ತೇನೆ. ಈಗ ಸಾಹೋ ಚಿತ್ರ ಬಿಡುಗಡೆಗೆ ತಯಾರಾಗಿದೆ. ನಿಮಗೆ ಇಷ್ಟ ಆಗುತ್ತೆ ಎಂದುಕೊಂಡಿದ್ದೇನೆ ಎಂದು ಹೇಳಿದರು.

ಸಾಹೋ ಚಿತ್ರ ಕನ್ನಡದಲ್ಲಿ ಡಬ್ ಆಗುತ್ತಿಲ್ಲ. ಮುಂದಿನ ಎಲ್ಲ ಚಿತ್ರಗಳನ್ನು ಡಬ್ ಮಾಡುತ್ತೇವೆ. ಬಾಹುಬಲಿ ಚಿತ್ರವನ್ನು ತಮಿಳು ಹಾಗೂ ತೆಲುಗುವಿನಲ್ಲಿ ಡಬ್ ಮಾಡಿದ್ದೇವೆ. ಆದರೆ ಹಿಂದಿ ಭಾಷೆಯಲ್ಲಿ ಡಬ್ ಮಾಡುವಾಗ ಸ್ವಲ್ಪ ಕಷ್ಟವಾಗಿತ್ತು. ಇಷ್ಟು ದಿನ ಕನ್ನಡದಲ್ಲಿ ಡಬ್ಬಿಂಗ್‍ಗೆ ಅವಕಾಶ ಇರಲಿಲ್ಲ. ಈಗ ಕನ್ನಡದಲ್ಲಿ ಡಬ್ಬಿಂಗ್ ಶುರುವಾಗಿದೆ. ಮುಂದೆ ಎಲ್ಲ ಚಿತ್ರಗಳನ್ನು ಡಬ್ ಮಾಡುತ್ತೇವೆ ಎಂದರು.

ಸಾಹೋ ಚಿತ್ರದ ಚಿತ್ರೀಕರಣ ಮುಗಿಸಲು ಒಂದೂವರೆಯಿಂದ ಎರಡು ವರ್ಷ ಬೇಕಾಯಿತು. ಮುಂಬೈ, ಹೈದರಾಬಾದ್, ಅಬುಧಾಬಿ, ಇಟಲಿ, ಆಸ್ಟ್ರೀಯಾ ದೇಶಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಬಾಹುಬಲಿ ನಂತರ ನಾನು ಲವ್ ಸ್ಟೋರಿ ಮಾಡಬೇಕು ಎಂದು ಹೇಳಿದೆ. ಆದರೆ ನನಗ ಲವ್‍ಸ್ಟೋರಿ ಸ್ಕ್ರಿಪ್ಟ್ ಸಿಗಲಿಲ್ಲ. ಆಗ ನನಗೆ ಸಾಹೋ ಚಿತ್ರದ ಸ್ಕ್ರಿಪ್ಟ್ ಸಿಕ್ತು. ಬಾಹುಬಲಿ ನಂತರ ಮತ್ತೆ ಆ್ಯಕ್ಷನ್ ಸಿನಿಮಾ ಮಾಡುವುದು ಕಷ್ಟ ಆಗಿತ್ತು. ಸಾಕಷ್ಟು ತಯಾರಿ ಮಾಡಬೇಕಾಗಿತ್ತು. ಹಾಗಾಗಿ ಸಿನಿಮಾ ಸ್ವಲ್ಪ ತಡವಾಯಿತು ಎಂದರು.

ಸಂಸ್ಕೃತದಲ್ಲಿ ಸಾಹೋ ಎಂದರೆ ‘ಜೈಹೋ’ ಎಂದರ್ಥ. ಈ ಚಿತ್ರದ ಟೈಟಲ್ ಏಕೆ ಆಯ್ಕೆ ಮಾಡಿದ್ದೇವೆ ಎಂದು ತಿಳಿಯಲು ನೀವು ಸಿನಿಮಾವನ್ನು ನೋಡಬೇಕು. ‘ಚತ್ರಪತಿ’ ನಂತರ ನಾನು ‘ಡಾರ್ಲಿಂಗ್’ ಹಾಗೂ ‘ಮಿ. ಪರ್ಫೆಕ್ಟ್’ ಸಿನಿಮಾದಲ್ಲಿ ನಟಿಸಿದ್ದೆ. ಈ ಸಿನಿಮಾಗಳು ಸೂಪರ್ ಹಿಟ್ ಆಗಿತ್ತು. ಸದ್ಯ ಸಾಹೋ ಚಿತ್ರದ ನಂತರ ನಾನು ಲವ್ ಸ್ಟೋರಿ ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರದ ಚಿತ್ರೀಕರಣ ಕೂಡ ಈಗ ಶುರುವಾಗಿದೆ ಎಂದು ಹೇಳಿದರು.

ಬಾಹುಬಲಿ ಚಿತ್ರ ಇತಿಹಾಸ ನಿರ್ಮಿಸಿದೆ. ಬಾಹುಬಲಿ ಚಿತ್ರದಿಂದ ನಾನು ಇಡೀ ಭಾರತಕ್ಕೆ ಪರಿಚಯನಾಗಿದ್ದೇನೆ. ಬಾಹುಬಲಿ ಯಾವಾಗಲೂ ನನ್ನ ಫೆವರೆಟ್ ಚಿತ್ರ ಆಗಿರುತ್ತದೆ. ಸದ್ಯ ಸಾಹೋ ಚಿತ್ರದ ಒಂದು ಆ್ಯಕ್ಷನ್ ದೃಶ್ಯಕ್ಕೆ ನಿರ್ಮಾಪಕರು 75 ಕೋಟಿ ರೂ. ಖರ್ಚು ಮಾಡಿದ್ದಾರೆ. ಪ್ರಪಂಚದ ಬೆಸ್ಟ್ ತಜ್ಞರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಬಾಹುಬಲಿ ಚಿತ್ರದಲ್ಲಿ ತೂಕ ಹೆಚ್ಚಿಸಿಕೊಳ್ಳಲು ಸಾಕಷ್ಟು ಮಾಂಸಾಹಾರ ತಿನ್ನ ಬೇಕಾಯಿತು. ಆದರೆ ಸಾಹೋ ಚಿತ್ರಕ್ಕೆ ತೂಕ ಇಳಿಸಿಕೊಳ್ಳಲು ನಾನು ಸಸ್ಯಹಾರಿ ಆಗಿದ್ದೆ. ನನ್ನಿಂದ ಹಲವು ಪ್ರಾಣಿಗಳ ಜೀವ ಉಳಿಯಿತು. ಚಿತ್ರದ ಪಾತ್ರಕ್ಕೆ ತಕ್ಕಂತೆ ನಾನು ದೇಹದ ತೂಕ ಬದಲಾಯಿಸಬೇಕು. 350 ಕೋಟಿ ರೂ. ಚಿತ್ರದಲ್ಲಿ ನಿರ್ಮಾಣವಾಗುತ್ತಿದ್ದರಿಂದ ಸಾಕಷ್ಟು ಪ್ಲಾನಿಂಗ್ ಇತ್ತು. ಈ ಚಿತ್ರಕ್ಕಾಗಿ ಶ್ರದ್ಧಾ ಕಪೂರ್ ಅವರು ಸಾಕಷ್ಟು ಸಮಯವನ್ನು ಕೊಟ್ಟಿದ್ದಾರೆ ಎಂದು ಹೇಳಿದರು.

ನಾನು ಸಾಕಷ್ಟು ಕನ್ನಡ ಸಿನಿಮಾಗಳನ್ನು ನೋಡಿದ್ದೇನೆ. ಇತ್ತೀಚೆಗೆ ನಾನು ಕೆಜಿಎಫ್ ಸಿನಿಮಾವನ್ನು ವೀಕ್ಷಿಸಿದೆ. ಈ ಚಿತ್ರ ತೆಲುಗುವಿನಲ್ಲೂ ಬಿಡುಗಡೆ ಆಗಿತ್ತು. ತೆಲುಗು ಅಭಿಮಾನಿಗಳು ಸೇರಿದಂತೆ ಭಾರತದ ಪ್ರೇಕ್ಷಕರು ಕೆಜಿಎಫ್ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಬಳಿಕ ಮಹಾಭಾರತದ ಚಿತ್ರದ ಬಗ್ಗೆ ಮಾತನಾಡಿದ ಅವರು, ಮಹಾಭಾರತದಲ್ಲಿ ನನಗೆ ಯಾವ ಪಾತ್ರ ಕೊಟ್ಟರು ನಾನು ಮಾಡುತ್ತೇನೆ. ಆದರೆ ಕರ್ಣ ಮತ್ತೆ ಅರ್ಜುನ ನನ್ನ ಇಷ್ಟವಾದ ಪಾತ್ರ ಎಂದು ಹೇಳಿದ್ದಾರೆ.

ಎಲ್ಲಾ ರಾಜ್ಯದ ಸಿನಿಮಾಗಳು ಈಗ ಭಾರತಾದ್ಯಂತ ಬಿಡುಗಡೆ ಆಗುತ್ತಿದೆ. ಕೆಜಿಎಫ್ ಚಿತ್ರ ಭಾರತದಲ್ಲಿ ಸೂಪರ್ ಹಿಟ್ ಆಗಿದೆ. ಬಾಹುಬಲಿ ಕೂಡ ಹೆಸರು ಮಾಡಿದೆ. ಮುಂದೆ ಪಂಜಾಬ್ ಸೇರಿದಂತೆ ಬೇರೆ ರಾಜ್ಯದ ಸಿನಿಮಾಗಳು ಭಾರತಾದ್ಯಂತ ಸದ್ದು ಮಾಡಲಿದೆ. ಒಟ್ಟಿನಲ್ಲಿ ಒಂದೇ ಭಾರತ ಆಗಲಿದೆ. ಇದು ತುಂಬಾ ಸುಂದರವಾದ ವಿಷಯ ಎಂದು ಪ್ರಭಾಸ್ ತಿಳಿಸಿದರು.

ನಾವು ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಮಾಡಿದ್ದೇವೆ. ನಿಮಗೆ ಆ್ಯಕ್ಷನ್ ಸಿನಿಮಾ ಇಷ್ಟವಾಗುತ್ತೆ ಎಂದುಕೊಂಡಿದ್ದೇನೆ. ಈ ಚಿತ್ರಕ್ಕಾಗಿ ನಾನು ಹಾಗೂ ಶ್ರದ್ಧಾ ಕಪೂರ್ ಟ್ರೈನಿಂಗ್ ಮಾಡಿದ್ದೇವೆ. ತಂತ್ರಜ್ಞರು, ಚಿತ್ರತಂಡ ಹಾಗೂ ನಿರ್ದೇಶಕರು ಈ ಸಿನಿಮಾಕ್ಕಾಗಿ ಹೆಚ್ಚು ಪ್ಲಾನಿಂಗ್ ಮಾಡಿಕೊಂಡಿದ್ದರು. ಹಾಲಿವುಡ್‍ನಿಂದ ನಾಲ್ಕೈದು ಮಂದಿ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ನಿಜವಾದ ಸ್ಟಂಟ್‍ಗಳನ್ನು ಮಾಡಲಾಗಿದೆ.

Leave a Reply

Your email address will not be published. Required fields are marked *