Connect with us

Dakshina Kannada

ಹೊಂಡ ತೆಗೆಯುತ್ತಿದ್ದ ವೇಳೆ ಮಣ್ಣು ಕುಸಿದು ಇಬ್ಬರು ಜೀವಂತ ಸಮಾಧಿ

Published

on

ಮಂಗಳೂರು: ಕೋಳಿ ತ್ಯಾಜ್ಯ ವಿಲೇವಾರಿ ಗುಂಡಿ ದುರಸ್ಥಿ ವೇಳೆ ಮಣ್ಣು ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಮಣ್ಣಿನಲ್ಲೇ ಸಮಾಧಿಯಾಗಿರುವ ಆಘಾತಕಾರಿ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಅರ್ಲಪದವಿನಲ್ಲಿ ಘಟನೆ ನಡೆದಿದ್ದು, ಪಾರ್ಪಳ್ಳದ ಕೂಲಿ ಕಾರ್ಮಿಕರಾದ ಬಾಬು ಮತ್ತು ರವಿ ಎಂದಿನಂತೆ ಇಂದು ಕೂಲಿ ಕೆಲಸಕ್ಕೆ ಬಂದಿದ್ದರು. ಕಡಮ್ಮಾಜೆ ಹಾಜಿ ಅಬ್ದುಲ್ಲಾರಿಗೆ ಸೇರಿದ ಕೋಳಿ ಫಾರ್ಮ್‍ನ ತ್ಯಾಜ್ಯ ವಿಲೇವಾರಿ ಗುಂಡಿಗೆ ಪೈಪ್ ಆಳವಡಿಸುವ ಕಾರ್ಯ ನಡೆಸುತ್ತಿದ್ದರು. ಆದರೆ ಗುಂಡಿಯ ಮೇಲ್ಭಾಗದಲ್ಲಿ ಹಾಕಿದ್ದ ಮಣ್ಣಿನ ಲೋಡ್‍ನಿಂದ ಸ್ಲ್ಯಾಬ್ ಮುರಿದು ಇಬ್ಬರೂ ಗುಂಡಿಯೊಳಗೆ ಬಿದ್ದಿದ್ದಾರೆ. ಬಿದ್ದ ಸಂದರ್ಭ ಪಕ್ಕದಲ್ಲೇ ಹಾಕಿದ್ದ ಮಣ್ಣಿನ ರಾಶಿಯು ಕೆಳಗೆ ಬಿದ್ದು, ಸಮಾಧಿಯಾಗಿದ್ದಾರೆ.

ಘಟನೆ ನಡೆದ ಸಂದರ್ಭ ಅಗ್ನಿಶಾಮಕ ದಳ, ಸಂಪ್ಯ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬಂದ ಅಧಿಕಾರಿ, ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ರಕ್ಷಣಾ ಕಾರ್ಯಚರಣೆ ನಡೆಸಿದರು. ಸಂಪೂರ್ಣವಾಗಿ ಮಣ್ಣು ಬಿದ್ದಿದ್ದರಿಂದ ಇಬ್ಬರು ಕಾರ್ಮಿಕರನ್ನು ಜೀವಂತವಾಗಿ ಹೊರಗೆ ತೆಗೆಯಲು ಸಾಧ್ಯವಾಗಲಿಲ್ಲ. ಮಣ್ಣಿನಡಿ ಹೂತು ಹೋಗಿದ್ದ ಇಬ್ಬರ ಮೃತದೇಹವನ್ನು ಹೊರತೆಗೆದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು. ಜಾಗದ ಮಾಲೀಕರು ಒಂದಷ್ಟು ಮುಂಜಾಗೃತಾ ಕ್ರಮ ಕೈಗೊಂಡಿದ್ದರೆ ಈ ಘಟನೆ ಆಗುತ್ತಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೆಲಸಕ್ಕೆ ತೆರಳಿದ್ದಾರೆ ಮರಳಿ ಬರುತ್ತಾರೆ ಎಂದು ದಾರಿ ಕಾಯುತ್ತಿದ್ದ ಮೃತರ ಕುಟುಂಬಸ್ಥರು ಘಟನೆಯಿಂದ ದಿಗ್ಭ್ರಮೆಗೊಳಗಾಗಿದ್ದಾರೆ. ಮನೆಗೆ ಆಧಾರ ಸ್ತಂಭವಾಗಿದ್ದ ಸದಸ್ಯರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರವಾದರೂ ಸಿಗಲಿ ಎಂಬುದು ಸ್ಥಳೀಯರ ಆಗ್ರಹವಾಗಿದೆ.

Click to comment

Leave a Reply

Your email address will not be published. Required fields are marked *