Connect with us

Latest

ಸಮೀಕ್ಷೆ ಬೆನ್ನಲ್ಲೇ ದೆಹಲಿಯಲ್ಲಿ ಗರಿಗೆದರಿದ ರಾಜಕೀಯ

Published

on

ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಎನ್‍ಡಿಎಗೆ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವ ನಿರೀಕ್ಷೆಗಳಿದ್ದು, ಸಮೀಕ್ಷೆಗಳ ವರದಿ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಭೆ ಕರೆದಿದ್ದಾರೆ.

ಅಮಿತ್ ಶಾ ನಾಳೆ(ಮಂಗಳವಾರ) ಎನ್‍ಡಿಎ ಒಕ್ಕೂಟದ ನಾಯಕರ ಸಭೆ ಕರೆದಿದ್ದು, ಮುಂದಿನ ರಾಜಕೀಯ ನಡೆಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧವಾಗಿರುವ ಬಿಜೆಪಿಗೆ ಎನ್‍ಡಿಎ ಒಕ್ಕೂಟದ ಪಕ್ಷಗಳ ಬೆಂಬಲದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆಯುತ್ತಿದ್ದಾರೆ ಎನ್ನಲಾಗಿದೆ.

ಇತ್ತ ಇಂದು ಯುಪಿಎ ಒಕ್ಕೂಟದ ಮುಖ್ಯಸ್ಥೆ ಸೋನಿಯಾ ಗಾಂಧಿ ಭೇಟಿಯಾಗಬೇಕಿದ್ದ ಬಿಎಸ್‍ಪಿ ಅಧಿನಾಯಕಿ ಮಾಯಾವತಿ ಎಕ್ಸಿಟ್ ಫೊಲ್ ಸಮೀಕ್ಷೆಗಳ ಬಳಿಕ ಯೂಟರ್ನ್ ಹೊಡೆದಿದ್ದಾರೆ. ಯುಪಿಎ ವಿರುದ್ಧದ ಫಲಿತಾಂಶ ಗೋಚರವಾದ ಬೆನ್ನಲ್ಲೇ ತಮ್ಮ ದೆಹಲಿ ಪ್ರವಾಸ ರದ್ದು ಮಾಡಿದ್ದಾರೆ. ನಿಗದಿಯಂತೆ ಇಂದು ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನ ಭೇಟಿಯಾಗಿ ಚುನಾವಣೊತ್ತರ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಸಬೇಕಿತ್ತು. ಆದರೆ ಇದಕ್ಕೆ ಬ್ರೇಕ್ ಹಾಕಿದ್ದಾರೆ.

ಫಲಿತಾಂಶದ ದಿನವೇ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ವಿಪಕ್ಷ ನಾಯಕರ ಸಭೆ ಆಯೋಜಿಸಲಾಗಿದ್ದು, ಭಾರೀ ಮಹತ್ವ ಪಡೆದುಕೊಂಡಿದೆ. ಬಿಜೆಪಿಯೇತರ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿರುವ ಪ್ರತಿಪಕ್ಷಗಳ ಪೈಕಿ ಯಾರೆಲ್ಲ ಹಾಜರಾಗಲಿದ್ದಾರೆ ಎಂಬ ಕುತೂಹಲ ಮನೆಮಾಡಿದೆ.