Tuesday, 20th November 2018

Recent News

ಜನಸಾಮಾನ್ಯನಿಗೆ ಪ್ರವೇಶವಿಲ್ಲದ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಜನಪ್ರತಿನಿಧಿಗಳ ಸವಾರಿ!

ಮಂಗಳೂರು: ಜನಸಾಮಾನ್ಯನಿಗೆ ಪ್ರವೇಶ ನಿಷೇಧವಿರುವ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಪೊಲೀಸ್ ಬೆಂಗಾವಲಿನೊಂದಿಗೆ ಕಾರಿನಲ್ಲಿ ಬಂದ ಜನಪ್ರತಿನಿಧಿಗಳ ತಂಡಕ್ಕೆ, ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾದ ಘಟನೆ ನಡೆದಿದೆ.

ಮಂಗಳವಾರ ಸಂಜೆ ಮಾಜಿ ಸಚಿವ ಬಿ.ಎ. ಮೊಯ್ದೀನ್ ಅಂತಿಮ ಸಂಸ್ಕಾರಕ್ಕೆಂದು ಸ್ಪೀಕರ್ ರಮೇಶ್ ಕುಮಾರ್, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಇದ್ದ ಸರ್ಕಾರಿ ವಿಐಪಿ ಕಾರುಗಳು ಪೊಲೀಸ್ ಬೆಂಗಾವಲಿನೊಂದಿಗೆ ಶಿರಾಡಿ ಘಾಟಿಯಲ್ಲಿ ಸಂಚಾರ ನಿಷೇಧ ಇದ್ದಾಗ್ಯೂ ಹಾಸನದ ಸಕಲೇಶಪುರದಿಂದ ಘಾಟಿಗೆ ನುಗ್ಗಿದ್ದವು.

ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಜನಪ್ರತಿನಿಧಿಗಳ ತಂಡ ಸುಲಭದ ದಾರಿಯೆಂದು ಶಿರಾಡಿ ಘಾಟಿಯಲ್ಲಿ ಆಗಮಿಸಿತ್ತು. ಆದರೆ ಈ ಕಾರುಗಳು ಘಾಟಿ ರಸ್ತೆ ಇಳಿದು ದಕ್ಷಿಣ ಕನ್ನಡ ಭಾಗ ತಲುಪುತ್ತಿದ್ದಂತೆ ಲಾವತ್ತಡ್ಕ ಎಂಬಲ್ಲಿ ಮಳೆಯಿಂದಾಗಿ ಬೃಹತ್ ಮರವೊಂದು ರಸ್ತೆಗೆ ಅಡ್ಡ ಬಿದ್ದು ತಡೆ ನೀಡಿತ್ತು.

ಜನಪ್ರತಿನಿಧಿಗಳ ದರ್ಪದ ನಡೆಗೆ ಕೊನೆಗೂ ರಸ್ತೆಗಡ್ಡ ಬಿದ್ದ ಮರವೇ ಅಡ್ಡಿಯಾಗಿ ಪರಿಣಮಿಸಿದ್ದು ವಿಶೇಷ. ಕಳೆದ 6 ತಿಂಗಳಿನಿಂದ ಶಿರಾಡಿಘಾಟ್ ರಸ್ತೆ ಕಾಂಕ್ರೀಟ್ ಕಾಮಗಾರಿ ಹಿನ್ನೆಲೆಯಲ್ಲಿ ಬಂದ್ ಆಗಿರುವ ಕಾರಣ ಸ್ಥಳೀಯರಿಗೂ ಪ್ರವೇಶ ನೀಡುತ್ತಿರಲಿಲ್ಲ. ಅಲ್ಲಿನ ಜನ ಸುತ್ತು ಬಳಸಿ ಹೋಗಿ ಸಮಸ್ಯೆ ಎದುರಿಸುತ್ತಿದ್ದಾರೆ.

ಜನಪ್ರತಿನಿಧಿಗಳಿಗೆ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗುವ ಮೊದಲೇ ಹೆದ್ದಾರಿಯಲ್ಲಿ ಪ್ರಯಾಣಿಸಲು ಅನುಮತಿ ಕೊಟ್ಟಿದ್ದು ಹೇಗೆ ಅನ್ನೋದು ಪ್ರಶ್ನೆ. ಒಂದು ವೇಳೆ ಇದೇ ಸಂದರ್ಭದಲ್ಲಿ ದುರಂತ ಸಂಭವಿಸುತ್ತಿದ್ದರೆ ಹೆದ್ದಾರಿ ಅಧಿಕಾರಿಗಳೇ ಹೊಣೆಯಾಗುತ್ತಿದ್ದರು ಅನ್ನೋದು ಸತ್ಯ.

Leave a Reply

Your email address will not be published. Required fields are marked *