Monday, 16th December 2019

Recent News

ತಮಿಳುನಾಡು ರಾಜಕಾರಣದಲ್ಲಿ ಅದ್ಭುತ ನಡೆಯಲಿದೆ- ರಜನಿಕಾಂತ್

– ಕಮಲ್ ಹಸನ್ ಮೈತ್ರಿ ಹೇಳಿಕೆಗೆ ರಜನಿ ಪ್ರತಿಕ್ರಿಯೆ

ಚೆನ್ನೈ: 2021ರ ವಿಧಾನಸಭೆ ಚುನಾವಣೆ ವೇಳೆ ತಮಿಳುನಾಡು ರಾಜಕಾರಣದಲ್ಲಿ ಮಹಾ ಅದ್ಭುತ ನಡೆಯಲಿದೆ ಎಂದು ಸೂಪರ್ ಸ್ಟಾರ್ ರಜಿನಿಕಾಂತ್ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಚೆನ್ನೈನಲ್ಲಿ ಮಾತನಾಡಿದ ಅವರು, ಅಧ್ಯಾತ್ಮಿಕ ರಾಜಕಾರಣಕ್ಕೆ ತಮಿಳುನಾಡು ಜನತೆ ಮಣೆ ಹಾಕುತ್ತಾರೆ ಎಂಬ ವಿಶ್ವಾಸವಿದೆ. 2021ರ ಚುನಾವಣೆಯಲ್ಲಿ ಶೇ.100 ತಮಿಳು ಜನತೆ ರಾಜಕೀಯದಲ್ಲಿ ದೊಡ್ಡ ಅದ್ಭುತ ಸೃಷ್ಟಿಸಲಿದ್ದಾರೆ ಎಂದರು.

ನೀವು ಹಾಗೂ ಕಮಲ್ ಹಾಸನ್ ಇಬ್ಬರೂ ಕೈ ಜೋಡಿಸಿದಲ್ಲಿ ಯಾರು ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ನಂತರ ಇದನ್ನು ನಿರ್ಧರಿಸಲಾಗುವುದು. ಚುನಾವಣೆ ಸಮೀಪಿಸುತ್ತಿರುವಾಗ ಪರಿಸ್ಥಿತಿಯನ್ನು ಅವಲಂಬಿಸಿ ಸಿಎಂ ಆಯ್ಕೆ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ತಮಿಳುನಾಡಿನ ಕಲ್ಯಾಣಕ್ಕಾಗಿ ಸುಪರ್‍ಸ್ಟಾರ್ ರಜನಿಕಾಂತ್ ಜೊತೆಗೆ ಕೈ ಜೋಡಿಸುವುದಾಗಿ ನಟ ಕಮಲ್ ಹಾಸನ್ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ ರಜನಿಕಾಂತ್ ಹೇಳಿಕೆ ಹೊರ ಬಿದ್ದಿದೆ. ಇಬ್ಬರೂ ಒಟ್ಟಿಗೆ ಸೇರುವ ಸಂದರ್ಭ ಎದುರಾದರೆ ಒಟ್ಟಿಗೆ ಸೇರುತ್ತೇವೆ ಎಂದು ಸ್ಪಷ್ಟಪಡಿಸಿದರು.

2021ರಲ್ಲಿ ಅದ್ಭುತ ನಡೆಯಲಿದೆ ಎಂದು ರಜನಿಕಾಂತ್ ಯಾವ ಆಧಾರದ ಮೇಲೆ ಹೇಳುತ್ತಾರೆ ಎಂದುದೇ ಅರ್ಥವಾಗುತ್ತಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ರಜನಿಕಾಂತ್ ಹೇಳಿಕೆಗೆ ತಿರುಗೇಟು ನೀಡಿದರು. ಅಲ್ಲದೆ ಹಲವು ಎಐಎಡಿಎಂಕೆ ನಾಯಕರು ಈ ಕುರಿತು ಕಿಡಿಕಾರಿದ್ದು, ಇಬ್ಬರು ನಟರು ಒಟ್ಟುಗೂಡಿದರೆ ಅದ್ಭುತ, ಪವಾಡ ನಡೆಯುತ್ತದೆ ಎನ್ನುವುದೆಲ್ಲ ಭ್ರಮೆ ಎಂದು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *