Connect with us

Cinema

ಡಿಸೆಂಬರ್ 12ಕ್ಕೆ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ?

Published

on

ಚೆನ್ನೈ: ಸೂಪರ್‍ಸ್ಟಾರ್ ರಜನಿಕಾಂತ್ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಆಗುವುದು ಪಕ್ಕಾ ಎಂದು ಹಿಂದೂ ಮಕ್ಕಳ ಕಚ್ಚಿ(ಎಚ್‍ಎಂಕೆ) ಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಅರ್ಜುನ್ ಸಂಪತ್ ಹೇಳಿದ್ದಾರೆ.

ಸೋಮವಾರ ಬೆಳಗ್ಗೆ ಅರ್ಜುನ್ ಸಂಪತ್ ರಜನಿಕಾಂತ್ ಅವರನ್ನು ಪೋಯಸ್ ಗಾರ್ಡನ್ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿಯಾದ ಬಳಿಕ ಮಾತನಾಡಿದ ಅವರು, ದ್ರಾವಿಡ ಪಕ್ಷಗಳಿಂದ ಮುಕ್ತವಾಗಲು ರಜನಿಕಾಂತ್ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎಂದು ತಿಳಿಸಿದರು.

ಕಳೆದ 50 ವರ್ಷಗಳಿಂದ ತಮಿಳುನಾಡು ದ್ರಾವಿಡ ಪಕ್ಷಗಳ ಆಡಳಿತದಿಂದ ನಲುಗಿ ಹೋಗಿದೆ. ಹೀಗಾಗಿ ನಾನು ರಾಜ್ಯದ ಜನರ ಒಳಿತಿಗಾಗಿ ರಾಜಕೀಯ ಪ್ರವೇಶ ಮಾಡಬೇಕೆಂದು ಮನವಿ ಮಾಡಿದೆ ಎಂದು ಅವರು ತಿಳಿಸಿದರು.

ಮಾತುಕತೆ ವೇಳೆ, ವ್ಯವಸ್ಥೆ ಈಗ ಭ್ರಷ್ಟವಾಗಿದೆ. ಒಂದು ವೇಳೆ ನಾನು ಏನು ಮಾಡದೇ ಇದ್ದರೆ ಅಪರಾಧಿ ಭಾವನೆ ನನ್ನನ್ನು ಕಾಡಲಿದೆ. ಹಿಮಾಲಯದಿಂದ ಹಿಡಿದು ದಕ್ಷಿಣದವರೆಗಿನ ನದಿಗಳ ಜೋಡಣೆ ಮಾಡುವ ಕನಸಿನ ಯೋಜನೆ ಪೂರ್ಣಗೊಳ್ಳಬೇಕಾದರೆ ರಾಜಕೀಯಕ್ಕೆ ಬಂದರೆ ಮಾತ್ರ ಅದು ಸಾಧ್ಯವಾಗುತ್ತದೆ ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು ಎಂದು ತಿಳಿಸಿದರು.

ರಾಜಕೀಯ ಅಲ್ಲದೇ ಆಧ್ಯತ್ಮದ ಬಗ್ಗೆ ನಾವು ಚರ್ಚೆ ನಡೆಸಿದ್ವಿ. ತಮಿಳಿನ ಸಂತರಾದ ನಯನಾರ ಮತ್ತು ಆಲ್ವರರ ಬಗ್ಗೆ ಮಾತನಾಡಿದ್ದೇವು. ಸ್ವಾಮಿ ಸಚ್ಚಿದಾನಂದ ಸರಸ್ವತಿ ಮತ್ತು ದಯಾನಂದ ಸರಸ್ವತಿ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ನಾನು ದಯಾನಂದರ ಶಿಷ್ಯ ಎಂದು ರಜನಿ ಹೇಳಿದರು ಎಂದರು.

ಅರ್ಜುನ್ ಸಂಪತ್ ಜೊತೆಗಿನ ಭೇಟಿ ಬಳಿಕ ಈಗ ರಜನಿಕಾಂತ್ ಡಿಸೆಂಬರ್ 12ರ ತಮ್ಮ 67ನೇ ಹುಟ್ಟುಹಬ್ಬದಂದು ರಾಜಕೀಯಕ್ಕೆ ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ಮೂಲಗಳಿಂದ ಸಿಕ್ಕಿದೆ. ರಜನೀಕಾಂತ್ ಈಗ ಇರುವ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗದೇ ತಮ್ಮದೇ ಹೊಸ ಪಕ್ಷವನ್ನು ಸ್ಥಾಪಿಸಲಿದ್ದಾರೆ. ಕಾಲಾ ರಜನಿ ಅವರ ಕೊನೆಯ ಚಿತ್ರವಾಗಲಿದ್ದು, ಮುಂದಿನ ವರ್ಷದಿಂದ ಅವರು ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಲಿದ್ದಾರೆ ಎಂದು ಹೇಳಲಾಗುತ್ತಿದೆ.