Crime
ಪೊಲೀಸ್ನಿಂದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ- ಪ್ರಶ್ನಿಸಿದ ವ್ಯಕ್ತಿಗೆ ಗುಂಡು ಹಾರಿಸಿದ

ಲಕ್ನೋ: ಪೊಲೀಸನೊಬ್ಬ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಇದನ್ನು ಪ್ರಶ್ನಿಸಲು ಬಂದ ವ್ಯಕ್ತಿ ಮೇಲೆ ಗುಂಡು ಹಾರಿಸಿದ್ದಾನೆ.
ಉತ್ತರ ಪ್ರದೇಶದ ಅಜಾಮ್ಘರ್ನಲ್ಲಿ ಘಟನೆ ನಡೆದಿದ್ದು, ಆರೋಪಿ ಪೊಲೀಸ್ನನ್ನು ಸರ್ವೇಶ್ ಎಂದು ಗುರುತಿಸಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಕಿಶನ್ಲಾಲ್ ಎನ್ನಲಾಗಿದೆ. ಸರಮೈರ್ ಪೊಲೀಸ್ ಠಾಣೆ ವ್ಯಾಪ್ತಿಯ ಕಮಲ್ಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ತೇಲಾಡುತ್ತಿದ್ದ ಪೊಲೀಸ್, ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದನ್ನು ತಡೆಯಲು ಹೋದ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ್ದಾನೆ.
ಗ್ರಾಮದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕಾಗಿ ಮಹಿಳೆ ತೆರಳುತ್ತಿದ್ದಳು. ಪೊಲೀಸ್ ಹಾಗೂ ಅವನ ಸ್ನೇಹಿತರು ರಸ್ತೆಯಲ್ಲಿ ಮದ್ಯ ಸೇವಿಸುತ್ತಿದ್ದರು. ಅದೇ ದಾರಿಯಲ್ಲಿ ಬರುತ್ತಿದ್ದ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿದ್ದಾರೆ. ಈ ಕುರಿತು ಕಿಶನ್ಲಾಲ್ ಆಕ್ಷೇಪಿಸಿದಾಗ ಜಗಳವಾಗಿದೆ. ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪೊಲೀಸ್ ಗುಂಡು ಹಾರಿಸಿದ್ದಾನೆ.
ಪೊಲೀಸ್ ಅಧಿಕಾರಿಗಳು ಇದೀಗ ಗೊಂಡಾದ ಪೊಲೀಸ್ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಸಂಬಂಧಿಸಿದ ಐಪಿಸಿ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ಕಿಶನ್ಲಾಲ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಾರಾಣಸಿಗೆ ಸ್ಥಳಾಂತರಿಸಲಾಗಿದೆ.
