Connect with us

Districts

ಸ್ಕ್ರೂ ಡ್ರೈವರಿನಿಂದ ಆಗದೆ ರಾಡ್ ತಂದು ಗ್ರಿಲ್ ಮುರಿದ್ರು – ಮಂಡ್ಯದಲ್ಲಿ ನಿಲ್ಲದ ಹುಂಡಿ ಕಳವು

Published

on

– ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ಯಾ ಹುಂಡಿ ಕಳ್ಳರ ಗ್ಯಾಂಗ್?

ಮಂಡ್ಯ: ಕಳೆದ ವಾರವಷ್ಟೇ ಜಿಲ್ಲೆಯಲ್ಲಿ ಮೂವರು ಅರ್ಚಕರನ್ನು ಬರ್ಬರವಾಗಿ ಹತ್ಯೆ ಮಾಡಿ ಹುಂಡಿ ದೋಚಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಇದೀಗ ಜಿಲ್ಲೆಯ ಮತ್ತೊಂದು ದೇಗುಲದ ಬಾಗಿಲು ಮುರಿದು ಹುಂಡಿಯನ್ನು ದೋಚಿರುವ ಪ್ರಕರಣ ನಡೆದಿದೆ. ಇದನ್ನೂ ಓದಿ: ಮಂಡ್ಯದಲ್ಲಿ ಮೂವರು ಅರ್ಚಕರ ಹತ್ಯೆ – ತಲಾ 5 ಲಕ್ಷ ಪರಿಹಾರ ಘೋಷಣೆ

ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹುಂಡಿ ಕಳ್ಳತನವಾಗಿದೆ. ರಾತ್ರಿ ದೇವಾಲಯಕ್ಕೆ ನುಗ್ಗಿರುವ 4 ರಿಂದ 5 ಮಂದಿಯ ಕಳ್ಳರ ಗ್ಯಾಂಗ್ ಹುಂಡಿ ದೋಚಿ ಪರಾರಿಯಾಗಿದ್ದಾರೆ. ಮಧ್ಯರಾತ್ರಿ ದೇವಸ್ಥಾನಕ್ಕೆ ಬಂದಿರುವ ಕಳ್ಳರ ಗ್ಯಾಂಗ್ ಮೊದಲು ದೇವಸ್ಥಾನದ ಸುತ್ತ ವೀಕ್ಷಣೆ ಮಾಡಿದೆ. ನಂತರ ದೇವಸ್ಥಾನದ ಬಾಗಿಲನ್ನು ಸ್ಕ್ರೂ ಡ್ರೈವರ್‌ನಿಂದ ಬಿಚ್ಚಲು ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ಅರ್ಚಕರನ್ನು ಕೊಂದ ಮೂವರು ಹಂತಕರ ಮೇಲೆ ಪೊಲೀಸರಿಂದ ಶೂಟ್‍ಔಟ್

ಅದು ಸಾಧ್ಯವಾಗದ ಕಾರಣ ಅಲ್ಲಿಂದ ಹಿಂತಿರುಗಿದ್ದಾರೆ. ನಂತರ 10 ನಿಮಿಷ ಬಿಟ್ಟು ಕಬ್ಬಿಣದ ರಾಡ್‍ವೊಂದನ್ನು ತಂದು ಗ್ರಿಲ್ ಮುರಿದಿದ್ದಾರೆ. ಬಳಿಕ ನೇರವಾಗಿ ದೇವಸ್ಥಾನದ ಹುಂಡಿಯ ಬಳಿ ಹೋಗಿ ಹುಂಡಿಯನ್ನು ಹೊತ್ತೊಯ್ದಿದ್ದಾರೆ. ಈ ಎಲ್ಲಾ ದೃಶ್ಯಗಳು ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಂದು ಮುಂಜಾನೆ ಎಂದಿನಂತೆ ದೇವಸ್ಥಾನದ ಮುಂದೆ ಜನರು ಸಂಚಾರ ಮಾಡುವಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳೀಯರು ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ವೀಕ್ಷಣೆ ಮಾಡಿ, ದೇವಸ್ಥಾನದ ಸಿಸಿಟಿವಿ ವಿಡಿಯೋವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.

Click to comment

Leave a Reply

Your email address will not be published. Required fields are marked *