Connect with us

ಲಾಕ್‍ಡೌನ್ ವೇಳೆ ಪೊಲೀಸರು ವಶಕ್ಕೆ ಪಡೆದ ವಾಹನಗಳಿಗೆ ಬಿಡುಗಡೆ ಭಾಗ್ಯ

ಲಾಕ್‍ಡೌನ್ ವೇಳೆ ಪೊಲೀಸರು ವಶಕ್ಕೆ ಪಡೆದ ವಾಹನಗಳಿಗೆ ಬಿಡುಗಡೆ ಭಾಗ್ಯ

– ರಿಲೀಸ್‍ಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು: ಲಾಕ್‍ಡೌನ್ ವೇಳೆ ಸೀಜ್ ಆಗಿದ್ದ ವಾಹನ ರಿಲೀಸ್ ಮಾಡಲು ಪೊಲೀಸರಿಗೆ ಅಧಿಕಾರವನ್ನು ನೀಡಿ ಹೈಕೋರ್ಟ್ ಆದೇಶ ನೀಡಿದೆ. ಪೊಲೀಸರೇ ದಂಡ ಕಟ್ಟಿಸಿಕೊಂಡು ಬಿಡಲು ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ.

ವಾಹನ ಬಿಡುಗಡೆಗಾಗಿ ನ್ಯಾಯಾಲಯಕ್ಕೆ ಓಡಾಡುವ ಅಗತ್ಯವಿಲ್ಲ. ಈ ರೀತಿ ಅಲೆದಾಡುವ ಬದಲು ಪೊಲೀಸರೇ ಗಾಡಿಯನ್ನು ರಿಲೀಸ್ ಮಾಡಬಹುದು. ಪೊಲೀಸರಿಗೇ ವಾಹನ ರಿಲೀಸ್ ಅಧಿಕಾರ ನೀಡಲಾಗಿದೆ. ಲಾಕ್‍ಡೌನ್ ಸಂದರ್ಭದಲ್ಲಿ ರೂಲ್ಸ್ ಬ್ರೇಕ್ ಮಾಡಿ ರಸ್ತೆಗಿಳಿದಿದ್ದ ಲಕ್ಷಾಂತರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಾಹನ ನಿಲುಗಡೆಗೆ ಸ್ಥಳವಿಲ್ಲದೇ ಸಮಸ್ಯೆಯಾಗಿತ್ತು ಈ ಹಿನ್ನೆಲೆಯಲ್ಲಿ ನಿರ್ದೇಶನ ಕೋರಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು.

ಸದ್ಯದ ಲಾಕ್‍ಡೌನ್ ಮುಗಿಯೋಕೆ ಇನ್ನು 6 ದಿನಗಳಷ್ಟೇ ಇದೆ. ಆದರೆ ಬೆಂಗಳೂರಲ್ಲಿ ಜೂನ್ 14ಕ್ಕೂ ಮೊದಲೇ ಅನ್‍ಲಾಕ್ ಆಗೋ ಎಲ್ಲಾ ಸಾಧ್ಯತೆ ಇದೆ. ತಜ್ಞರು ಹೇಳಿರುವಂತೆ ಬೆಂಗಳೂರು ಅನ್‍ಲಾಕ್‍ಗೆ ಪಾಸಿಟಿವಿಟಿ ರೇಟ್ ಶೇ.3 ಇಳಿಯಬೇಕು. ಇದೀಗ ಸೋಂಕು ಪ್ರಮಾಣ ಶೇಕಡಾ 3.82ಕ್ಕೆ ಇಳಿದಿದೆ. ಕಳೆದ 4 ದಿನಗಳಿಂದ ಬೆಂಗಳೂರಿನಲ್ಲಿ ಸೋಂಕು ಪ್ರಮಾಣ ಶೇಕಡಾ 5ರೊಳಗೆ ಇದೆ. ಪಾಲಿಕೆಯ 8 ವಲಯಗಳಲ್ಲೂ 300ಕ್ಕಿಂತ ಕಡಿಮೆ ಕೇಸ್ ದಾಖಲಾಗಿದೆ. ಇನ್ನು ಅನ್‍ಲಾಕ್ ಬಗ್ಗೆ ಖುದ್ದು ಬಿಬಿಎಂಪಿ ಮುಖ್ಯ ಆಯುಕ್ತರೇ ಸುಳಿವು ಕೊಟ್ಟಿದ್ದಾರೆ.

ಸೋಂಕು ಪ್ರಮಾಣ ಶೇಕಡಾ 5ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರಿಸಬಹುದು ಎನ್ನಲಾಗುತ್ತಿದೆ. ಬೀದರ್ ನಲ್ಲಿ ಕಳೆದ ಒಂದು ವಾರದಿಂದ ಪಾಸಿಟಿವಿಟಿ ರೇಟ್ ಶೇಕಡಾ 1ಕ್ಕಿಂತ ಕಡಿಮೆ ಇದೆ. ಈ ಮೂಲಕ ಬೀದರ್ ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಡಿಸಿಎಂ ಅಶ್ವಥ್ ನಾರಾಯಣ ಕೂಡ ಅನ್‍ಲಾಕ್ ಸುಳಿವು ಕೊಟ್ಟಿದ್ದಾರೆ.

ಬಹುತೇಕ ಜಿಲ್ಲೆಗಳಲ್ಲಿ ಕೊರೊನಾ ಹತೋಟಿಗೆ ಬಂದಿದೆ. ಇನ್ನು 2-3 ದಿನದಲ್ಲಿ ಸಿಎಂ ತೀರ್ಮಾನ ಕೈಗೊಳ್ತಾರೆ ಎಂದು ತಿಳಿಸಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಕೂಡ, ಜೂನ್ 14ರ ನಂತರ ಲಾಕ್ ಸಡಿಲಿಕೆ ಆಗಲಿದೆ. ಹಂತಹಂತವಾಗಿ ಬಸ್‍ಗಳನ್ನು ಕಾರ್ಯಾರಂಭ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

Advertisement
Advertisement