Dharwad
ನಕಲಿ ಅಭ್ಯರ್ಥಿ ಪರ ಪರೀಕ್ಷೆ ಬರೆದ ಅಸಲಿ ಪೊಲೀಸ್ ಪೇದೆ

– ನಕಲಿ ಅಭ್ಯರ್ಥಿ ಪರ ಅಸಲಿ ಪೊಲೀಸನಿಂದ ಪರೀಕ್ಷೆ
ಹುಬ್ಬಳ್ಳಿ: ಪೊಲೀಸ್ ಪೇದೆಗಳ ನೇಮಕಾತಿಯ ಅರ್ಹತಾ ಪರೀಕ್ಷೆಯಲ್ಲಿ ನಕಲಿ ಅಭ್ಯರ್ಥಿಯೊರ್ವ ಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ಪರೀಕ್ಷಾ ಕೇಂದ್ರದಲ್ಲಿ ನಕಲಿ ಅಭ್ಯರ್ಥಿ ಪರವಾಗಿ ಅಸಲಿ ಪೊಲೀಸ್ ಪೇದೆ ಪರೀಕ್ಷೆ ಬರೆಯುವ ವೇಳೆ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾಗಿದ್ದಾನೆ. ಹುಬ್ಬಳ್ಳಿ ಧಾರವಾಡದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ನಡೆದ ಪೊಲೀಸ್ ಅರ್ಹತಾ ಪರೀಕ್ಷೆಯಲ್ಲಿ ಪೊಲೀಸ್ ಪೇದೆಯೋರ್ವ ಬೇರೆ ಅಭ್ಯರ್ಥಿಯ ಪರವಾಗಿ ಪರೀಕ್ಷೆ ಬರೆಯಲು ಹೋಗಿ ಸಿಕ್ಕಿಬಿದ್ದಿದ್ದಾನೆ. ನಕಲಿ ಅಭ್ಯರ್ಥಿ ಪರವಾಗಿ ಪರೀಕ್ಷೆ ಬರೆಯುತ್ತಿದ್ದ ಅಸಲಿ ಪೇದೆಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಗೋಕುಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕೆಎಲ್ಇ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬೇರೆ ಅಭ್ಯರ್ಥಿಯ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ಗೋಕಾಕ ತಾಲೂಕಿನ ಹಡಗಿನಹಾಳ ಗ್ರಾಮದ ಅಡಿವೆಪ್ಪ ಯರಗುಪ್ಪಿ ಎನ್ನುವ ಪೇದೆ ಮಣಿಕಂಠ ಎಂಬ ಅಭ್ಯರ್ಥಿಯ ಹೆಸರಿನಲ್ಲಿ ಹಾಜರಾಗಿದ್ದ ವೇಳೆ ಅಕ್ರಮ ಬಯಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಡಿಸಿಪಿ ಕೆ.ರಾಮರಾಜನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಸುಮಾರು ಒಂದು ಗಂಟೆಯ ಹುಡುಕಾಟದ ನಂತರ ನಕಲಿ ಅಭ್ಯರ್ಥಿ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ಅಸಲಿ ಪೊಲೀಸನನ್ನ ವಶಕ್ಕೆ ಪಡೆದು ಗೋಕುಲ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಂದುವರೆಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಡಿಸಿಪಿ ರಾಮರಾಜನ್ ಪೊಲೀಸ್, ಅರ್ಹತಾ ಪರೀಕ್ಷೆಯಲ್ಲಿ ಬೇರೆ ಅಭ್ಯರ್ಥಿ ಪರ ಪರೀಕ್ಷೆ ಬರೆಯಲು ಕಾರಣವೇನೆಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.
