Friday, 22nd November 2019

ಫೈನಾನ್ಸ್ ಮಾಲೀಕನ ಆಮಿಷಕ್ಕೆ ರೈತನ ಮೇಲೆ ಸುಳ್ಯ ಪೊಲೀಸ್ ಇನ್ಸ್​ಪೆಕ್ಟರ್ ಹಲ್ಲೆ!

ಮಂಗಳೂರು: ಫೈನಾನ್ಸ್ ಮಾಲೀಕನ ಆಮಿಷಕ್ಕೆ ರೈತರೊಬ್ಬರ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪೊಲೀಸ್ ಇನ್ಸ್​ಪೆಕ್ಟರ್ ಹಲ್ಲೆ ನಡೆಸಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ.

ದಕ್ಷಿಣ ಕನ್ನಡ-ಕೊಡಗು ಜಿಲ್ಲೆಯ ಗಡಿಭಾಗ ಸಂಪಾಜೆ ಸಮೀಪದ ಬಾಲೆಂಬಿ ನಿವಾಸಿ ರೈತ ರವೀಂದ್ರ ಅವರು ಸುಳ್ಯ ಪೊಲೀಸ್ ಇನ್ಸ್​ಪೆಕ್ಟರ್ ಆಗಿರುವ ಮಂಜುನಾಥ್ ನನ್ನ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.

ಸ್ಥಳೀಯ ಅನಧಿಕೃತ ಫೈನಾನ್ಸ್‍ನಿಂದ ರವೀಂದ್ರ ಅವರು ಬಡ್ಡಿಗೆ ಒಂದು ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಫೈನಾನ್ಸ್ ನೀಡಿದ್ದ ಖಾಲಿ ಚೆಕ್ ಬೌನ್ಸ್ ಆಗಿ, ಸಾಲ ಮರುಪಾವತಿ ಮಾಡಲಾಗದೇ ಚಕ್ರ ಬಡ್ಡಿಯ ಸುಳಿಗೆ ಬಿದ್ದ ರವೀಂದ್ರ ವಿರುದ್ಧ ಫೈನಾನ್ಸ್ ಮಾಲೀಕ ಡಿ.ಬಿ ಕೇಶವ ಸುಳ್ಯ ಕೋರ್ಟ್ ನಲ್ಲಿ ದೂರು ನೀಡಿದ್ದರು.

ಈ ಬಗ್ಗೆ ಜಿಲ್ಲಾ ನ್ಯಾಯಾಲಯದಿಂದ ರವೀಂದ್ರ ವಿರುದ್ಧ ವಾರೆಂಟ್ ಜಾರಿಯಾಗಿತ್ತು. ವಾರೆಂಟ್ ಜಾರಿಯಾದ ಹಿನ್ನೆಲೆಯಲ್ಲಿ ರವೀಂದ್ರ ಬೆಂಗಳೂರಿನ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ, ಸ್ಟೇ ಆರ್ಡರ್ ಪಡೆದಿದ್ದರು. ಇದೇ ವೇಳೆ ವಾರೆಂಟ್ ಹಿಡಿದು ಸುಳ್ಯ ಪೊಲೀಸರು ರವೀಂದ್ರ ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.

ಸ್ಟೇ ಆರ್ಡರ್ ಸಹಿತ ಡಿಸೆಂಬರ್ 4 ರಂದು ಮುಂಜಾನೆ ಬೆಂಗಳೂರಿನಿಂದ ಸುಳ್ಯಕ್ಕೆ ಆಗಮಿಸುತ್ತಿದ್ದಾಗಲೇ ಸುಳ್ಯ ಇನ್ಸ್​ಪೆಕ್ಟರ್ ಮಂಜುನಾಥ್, ರವೀಂದ್ರ ಅವರನ್ನು ಠಾಣೆಗೆ ಎಳೆದೊಯ್ದಿದ್ದಾರೆ. ಬಳಿಕ ಠಾಣೆಯಲ್ಲಿ ಕೂಡಿ ಹಾಕಿ, ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್ ನಲ್ಲಿ ಥಳಿಸಿದ್ದಾರೆಂದು ಆರೋಪಿಸಲಾಗಿದೆ.

ಕೋರ್ಟ್ ಆದೇಶ ಇದ್ದರೂ ಕ್ಯಾರೇ ಮಾಡದೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ರೈತ ರವೀಂದ್ರ ಅವರು ಈಗ ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡಿದ್ದಾರೆ. ಹೊಟ್ಟೆಯಲ್ಲಿ ಗೆಡ್ಡೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದ ರವೀಂದ್ರ, ಪೊಲೀಸರ ದೌರ್ಜನ್ಯದಿಂದಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಾನು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಬೆಂಬಲಿಗ. ನನ್ನನ್ನು ಯಾರು ಏನೂ ಮಾಡಲಾಗದು ಎಂದು ಇನ್ಸ್​ಪೆಕ್ಟರ್ ಬೆದರಿಸಿದ್ದಾರೆ ಎಂದು ರವಿಂದ್ರ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *