ಮಂಗಳೂರು: ಅಕ್ರಮ ಮರಳು ಸಾಗಾಟ ಆಗಿದೆಯೆಂದು ನಿರೂಪಿಸಲು ಪೊಲೀಸರೇ ಸೇರಿ ಟಿಪ್ಪರ್ ಲಾರಿಗೆ ಮರಳು ಲೋಡ್ ಮಾಡಿದ ಘಟನೆ ದಕ್ಷಿಣ ಕನ್ನಡದ ಪೊಳಲಿಯಲ್ಲಿ ನಡೆದಿದೆ.
ಮರಳು ಸಾಗಾಣಿಕೆ ನಿಷೇಧ ಇದ್ದರೂ, ಮಂಗಳೂರಿನ ಪೊಳಲಿ ಸಮೀಪದ ಅಡ್ಡೂರಿನಲ್ಲಿ ಅಕ್ಬರ್ ಆಲಿ ಎಂಬವರಿಗೆ ಸೇರಿದ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ ಎನ್ನುವ ದೂರು ಪೊಲೀಸರಿಗೆ ಬಂದಿತ್ತು. ಆದರೆ ಸ್ಥಳಕ್ಕೆ ತೆರಳಿದಾಗ, ಲಾರಿಯನ್ನು ಅಕ್ಬರ್ ಆಲಿಯವರ ಮನೆಯಲ್ಲಿ ಖಾಲಿ ಮಾಡಿ ನಿಲ್ಲಿಸಲಾಗಿತ್ತು.
ಲಾರಿ ಸೀಜ್ ಮಾಡಿಕೊಂಡು ಬರಲು ಇನ್ಸ್ ಸ್ಪೆಕ್ಟರ್ ಹೇಳಿದ್ದರಿಂದ ಪೊಲೀಸರು ಸೀಜ್ ಮಾಡಲು ಬಂದಿದ್ದರು. ಆದರೆ ಖಾಲಿ ಲಾರಿ ಸೀಜ್ ಮಾಡಿದ್ರೆ ಪ್ರಕರಣ ದಾಖಲಿಸಲು ಆಗುವುದಿಲ್ಲ ಎಂದು ತಿಳಿದ ಪೊಲೀಸ್ ಸಿಬ್ಬಂದಿ ಸೇರಿ ಅಲ್ಲಿ ನಿರ್ಮಾಣ ಹಂತದ ಕಟ್ಟಡದ ಮುಂದೆ ರಾಶಿ ಹಾಕಿದ್ದ ಮರಳನ್ನು ಲಾರಿಗೆ ತುಂಬಿಸಿದ್ದಾರೆ. ಆದರೆ, ಪೊಲೀಸರೇ ಸೇರಿ ಲಾರಿಗೆ ಮರಳು ಲೋಡ್ ಮಾಡಿದ್ದನ್ನು ಮರೆಯಲ್ಲಿ ನಿಂತು ಕೆಲವರು ವಿಡಿಯೋ ಮಾಡಿದ್ದಾರೆ.
ಪೊಲೀಸರು ನಮ್ಮನ್ನು ಟಾರ್ಗೆಟ್ ಮಾಡಿ, ಮರಳು ಸೀಜ್ ಮಾಡಿ ಕೇಸ್ ದಾಖಲಿಸಲು ಹೀಗೆ ಮಾಡಿದ್ದಾರೆಂದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ವಿಡಿಯೋ ಈಗ ವೈರಲ್ ಆಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv