Connect with us

Districts

ನಡು ರಸ್ತೆಯಲ್ಲೇ ಪ್ರತಿಭಟನೆಗೆ ಕುಳಿತ ಪೊಲೀಸ್ ಕಾನ್‍ಸ್ಟೇಬಲ್

Published

on

– ಕಾರಣ ತಿಳಿಯಲು ಜಮಾಯಿಸಿದ ಜನ

ಹಾಸನ: ಪೊಲೀಸ್ ಪೇದೆಯೊಬ್ಬರು ತಮಗೆ ನ್ಯಾಯ ಬೇಕೆಂದು ನಡುರಸ್ತೆಯಲ್ಲಿ ಪ್ರತಿಭಟನೆ ಮಾಡಿರುವ ಘಟನೆ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ಮಂಗಳವಾರ ಸಂಜೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಯಾನಂದ್ ಪ್ರತಿಭಟನೆಗೆ ಕುಳಿತ ಗ್ರಾಮಾಂತರ ಠಾಣೆಯ ಪೋಲಿಸ್ ಕಾನ್‍ಸ್ಟೇಬಲ್. ರಾಷ್ಟ್ರೀಯ ಹೆದ್ದಾರಿ 75ರ ಅಪೋಲೋ ಮೆಡಿಕಲ್‍ನ ಮುಂಭಾಗ ಕಾರ್ ನಿಲ್ಲಿಸಿ ಔಷಧಿ ತರಲು ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ ತಹಶೀಲ್ದಾರ್ ಮಂಜುನಾಥ್ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲುಗಡೆಯಾಗಿರುವುದನ್ನು ಗಮನಿಸಿದ್ದಾರೆ. ತಮ್ಮ ಕಾರು ಚಾಲಕನಿಗೆ ವಾಹನದ ಗಾಳಿ ಬಿಡಲು ಹೇಳಿದರು. ತಹಶೀಲ್ದಾರ್ ವಾಹನದ ಚಾಲಕ ಕಾರಿನ ನಾಲ್ಕು ಚಕ್ರದ ಗಾಳಿ ಬಿಟ್ಟಿದ್ದಾರೆ. ಈ ವೇಳೆ ಮೆಡಿಕಲ್ ಶಾಪ್‍ನಿಂದ ಪೇದೆ ಹೊರ ಬಂದಿದ್ದು ತಹಶೀಲ್ದಾರ್ ಮಂಜುನಾಥ್ ಜೊತೆ ಮಾತಿನ ಚಕಾಮುಖಿ ನಡೆಸಿದ್ದಾರೆ. ನಂತರ ಸ್ಥಳದಿಂದ ತಹಶೀಲ್ದಾರ್ ಬೇರೆಡೆಗೆ ತೆರಳಿದ್ದಾರೆ.

ಈ ವೇಳೆ ಪೇದೆ ದಯಾನಂದ್ ಮಹಾತ್ಮ ಗಾಂಧೀಜಿಯವರ ಫೋಟೋ ಹಿಡಿದುಕೊಂಡು ಕಾರಿನ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಸಕಲೇಶಪುರದಲ್ಲಿ ಬಹಳ ಕಿರಿದಾದ ಜಾಗವಿದ್ದು ಕೇವಲ 2 ನಿಮಿಷದಲ್ಲಿ ಮೆಡಿಕಲ್ ಶಾಪ್ ನಿಂದ ಹೊರ ಬರುವಷ್ಟರಲ್ಲಿ ಕಾರಿನ ನಾಲ್ಕು ಚಕ್ರದ ಗಾಳಿಯನ್ನು ತೆಗೆದಿದ್ದು ಸರಿಯಲ್ಲ. ತಹಶೀಲ್ದಾರ್ ಬೇಕಿದಲ್ಲಿ ದಂಡ ಹಾಕಲಿ ಅಥವಾ ನೋಟಿಸ್ ನೀಡಲಿ, ನನಗೆ ನ್ಯಾಯ ಬೇಕು ಎಂದು ಆಗ್ರಹಿಸಿ ಧರಣಿ ಕುಳಿತು ಆಕ್ರೋಶ ಹೊರಹಾಕಿದ್ದಾರೆ.

ಇದರಿಂದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೆಲವು ಸಮಯ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು. ರಸ್ತೆಯಲ್ಲಿ ಹೋಗುವವರು ಪೇದೆಯ ಈ ವರಸೆ ಕಂಡು ಏನೆಂದು ಅರ್ಥವಾಗದೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಕೆಲವರಿಗೆ ಪೇದೆಯ ಈ ವರಸೆ ಮೋಜು ತಂದರೆ ಪೋಲಿಸರು ಈತನ ಮನವೊಲಿಸಲು ಪರದಾಡಬೇಕಾಯಿತು.

ಅಂತಿಮವಾಗಿ ನಗರ ಠಾಣೆ ಪಿಎಸ್‍ಐ ರಾಘವೇಂದ್ರ ಹಾಗೂ ಗ್ರಾಮಾಂತರ ಠಾಣೆಯ ಪಿಎಸ್‍ಐ ಚಂದ್ರಶೇಖರ್ ಬಂದು ಇತರ ಪೋಲಿಸರ ಸಹಾಯದಿಂದ ಪೇದೆಯನ್ನು ಎತ್ತಿಕೊಂಡು ನಗರ ಠಾಣೆಗೆ ಕರೆದೊಯ್ದರು. ಕಾರನ್ನು ಪಿಕಪ್ ಮೂಲಕ ತೆಗೆದುಕೊಂಡು ಹೋಗಲಾಯಿತು.

Click to comment

Leave a Reply

Your email address will not be published. Required fields are marked *