‘ಪೈಲ್ವಾನ್’ ಸುದೀಪ್ ನಿವಾಸಕ್ಕೆ ಕಮಿಷನರ್ ಭಾಸ್ಕರ್ ರಾವ್ ಭೇಟಿ!

ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರದ ಪೈರಸಿಯ ಸುತ್ತಾ ಹಲವಾರು ದಿಕ್ಕಿನ ಚರ್ಚೆ, ಅಭಿಮಾನಿಗಳ ನಡುವಿನ ತಿಕ್ಕಾಟದ ವಿದ್ಯಮಾನಗಳು ಕೆಲ ದಿನಗಳಿಂದ ಜೋರಾಗಿವೆ. ಇದೆಲ್ಲದರ ನಡುವೆಯೇ ಪೈಲ್ವಾನ್ ಯಶಸ್ವಿ ಪ್ರದರ್ಶನ ಕಾಣುತ್ತಾ, ಅದಕ್ಕೆ ತಕ್ಕುದಾದ ಕಲೆಕ್ಷನ್ನಿನೊಂದಿಗೆ ಮುಂದುವರಿಯುತ್ತಿದೆ. ಪೈರಸಿ ಬಗೆಗಿನ ವಾದ ವಿವಾದಗಳು ಚಾಲ್ತಿಯಲ್ಲಿರುವಾಗಲೇ ಇಂದು ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ಸುದೀಪ್ ಮನೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ನೀಡಿದ್ದಾರೆ.

ಸುದೀಪ್ ಇಂದು ಭಾಸ್ಕರ್ ರಾವ್ ಅವರೊಂದಿಗಿರೋ ಫೋಟೋವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಅತ್ತ ಅಭಿಮಾನಿಗಳ ನಡುವಿನ ಕಲಹ ತಾರಕಕ್ಕೇರಿರೋ ಘಳಿಗೆಯಲ್ಲಿಯೇ ಈ ದಿನ ಬೆಳ್ಳಂಬೆಳಗ್ಗೆ ಸುದೀಪ್ ಮನೆ ಮುಂದೆ ಪೊಲೀಸರು ಬೀಡು ಬಿಟ್ಟಿದ್ದರಿಂದ ಜನ ಈ ಬಗ್ಗೆ ಕುತೂಹಲಗೊಂಡಿದ್ದರು. ಬಳಿಕ ಭಾಸ್ಕರ್ ರಾವ್, ಸುದೀಪ್ ಮನೆಗೆ ಭೇಟಿ ನೀಡಿದ್ದಾರೆನ್ನಲಾಗಿದೆ. ಆದರೆ ಈ ಭೇಟಿಯ ಹಿಂದಿನ ಉದ್ದೇಶವೇನೆಂಬುದು ಮಾತ್ರ ಜಾಹೀರಾಗಿಲ್ಲ.

ಭಾಸ್ಕರ್ ರಾವ್ ಅವರು ಸುದೀಪ್ ಮತ್ತು ಅವರ ಕುಟುಂಬದೊಂದಿಗೆ ಒಂದಷ್ಟು ಕಾಲ ಕಳೆದಿದ್ದಾರೆ. ಕಿಚ್ಚ ಹಾಗೂ ಅವರ ತಂದೆಯೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಕಮಿಷನರ್ ಭೇಟಿಯ ಸುತ್ತಲೂ ಈಗ ಕ್ಯೂರಿಯಾಸಿಟಿ ಮಡುಗಟ್ಟಿಕೊಂಡಿದೆ. ಬೇರೆ ಸಮಯದಲ್ಲಾಗಿದ್ದರೆ ಇದು ಇಷ್ಟೊಂದು ಮಹತ್ವದ ಸಂಗತಿಯಾಗುತ್ತಿರಲಿಲ್ಲವೇನೋ. ಆದರೆ ಇತ್ತೀಚೆಗಷ್ಟೇ ಪೈಲ್ವಾನ್ ಪೈರಸಿ ವಿರುದ್ಧ ಪೈಲ್ವಾನ್ ಚಿತ್ರತಂಡ ಸೈಬರ್ ಕ್ರೈಂಗೆ ದೂರು ಸಲ್ಲಿಸಿದೆ. ಈ ಹೊತ್ತಿನಲ್ಲಿಯೇ ಪೊಲೀಸ್ ಆಯುಕ್ತರ ಭೇಟಿ ಸಹಜವಾಗಿಯೇ ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *