Tuesday, 21st January 2020

Recent News

ಸೋತ ಮೊದಲ ಮೀಟೂ ಪ್ರಕರಣ- ನಾನಾ ಪಾಟೇಕರ್ ಮೇಲೆ ತನುಶ್ರೀ ದತ್ತಾ ಹಾಕಿದ್ದ ಕೇಸ್ ಕ್ಲೋಸ್

ಮುಂಬೈ: ಬಾಲಿವುಡ್ ನಟ ನಾನಾ ಪಾಟೇಕರ್ ಮೇಲೆ ನಟಿ ತನುಶ್ರೀ ದತ್ತಾ ಮೀಟೂ ಅಭಿಯಾನದಡಿ ಹಾಕಿದ್ದ ಲೈಂಗಿಕ ಕಿರುಕುಳದ ಪ್ರಕರಣ ನೆಲಕಚ್ಚಿದ್ದು, ಈ ಸಂಬಂಧ ಸರಿಯಾದ ಸಾಕ್ಷಿ ಸಿಕ್ಕದ ಹಿನ್ನೆಲೆ ಪೊಲೀಸರು ಪ್ರಕರಣವನ್ನು ಕೈಬಿಟ್ಟಿದ್ದಾರೆ.

ಕಳೆದ ವರ್ಷ ನಟಿ ತನುಶ್ರೀ ದತ್ತಾ ನಾನಾ ಪಾಟೇಕರ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದ್ದರು. ಆದರೆ ಪೊಲೀಸರು ಈ ಸಂಬಂಧ ನಾನಾ ಪಾಟೇಕರ್ ವಿರುದ್ಧ ಯಾವುದೇ ಆಧಾರ ಸಿಗದ ಹಿನ್ನೆಲೆ ಪ್ರಕರಣವನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಭಾರತದಲ್ಲಿನ ಮೊದಲ ಮೀ ಟೂ ಪ್ರಕರಣ ಸೋಲು ಕಂಡಿದೆ.

ಈ ಹಿಂದೆ ತನುಶ್ರೀ ಅವರು ನಾನಾ ಪಾಟೇಕರ್ ವಿರುದ್ಧ ಪ್ರಕರಣ ಕೈಬಿಟ್ಟಿರುವುದು ಸುಳ್ಳು, ಸುಮ್ಮನೆ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಮೀಟೂ ಪ್ರಕರಣ ಬಯಲಿಗೆ ಬಂದ ಬಳಿಕ ಪಾಟೇಕರ್‍ಗೆ ಬಾಲಿವುಡ್‍ನಲ್ಲಿ ಯಾವುದೇ ಅವಕಾಶಗಳು ಸಿಗುತ್ತಿಲ್ಲ. ಆದ್ದರಿಂದ ಅವರ ಬೆಂಬಲಿಗರು ಈ ರೀತಿ ಕುತಂತ್ರ ಮಾಡುತ್ತಿದ್ದಾರೆ. ಈ ಪ್ರಕರಣದಿಂದ ಪಾಟೇಕರ್ ಅವರ ಮಾನ ಹರಾಜಾಗಿದೆ. ಅವರ ನಿಜ ಮುಖವನ್ನು ಮರೆಮಾಚಿ, ಸಮಾಜದ ಎದುರು ಸಜ್ಜನರ ರೀತಿ ಗುರುತಿಸಿಕೊಳ್ಳಲು ಈ ಪ್ರಯತ್ನಗಳು ನಡೆಯುತ್ತಿದೆ. ಪಾಟೇಕರ್ ಸಮಾಜದಲ್ಲಿ ಎಲ್ಲರೆದುರು ಕಳೆದುಕೊಂಡ ಗೌರವವನ್ನ ಮತ್ತೆ ಪಡೆಯಲು ಈ ರೀತಿ ಸುಳ್ಳು ಸುದ್ದಿಯಲ್ಲಿ ಹರಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಕಳೆದ ವರ್ಷ ತನುಶ್ರೀ ದತ್ತಾ ನಟ ನಾನಾ ಪಾಟೇಕರ್ ವಿರುದ್ಧ ತಮ್ಮ ಚಿತ್ರ ‘ಹಾರ್ನ್ ಓಕೆ ಪ್ಲೀಸ್’ನ ವಿಶೇಷ ಹಾಡಿನ ಶೂಟಿಂಗ್ ವೇಳೆ ಲೈಂಗಿಕ ಕಿರುಕುಳ ನೀಡಿದ್ದರು ಆರೋಪಿಸಿದ್ದರು. ಡ್ಯಾನ್ಸ್ ಮಾಡುವ ವೇಳೆ ನನಗೆ ಮುಜುಗರವಾಗುವಂತ ಸ್ಟೆಪ್ಸ್‍ಗಳನ್ನು ಹಾಕಲು ಒತ್ತಾಯಿಸುತ್ತಿದ್ದರು ಎಂದು ಮೀಟೂ ಅಭಿಯಾನದ ಅಡಿಯಲ್ಲಿ ಆರೋಪಿಸಿ, ದೂರು ನೀಡಿದ್ದರು. ಅಲ್ಲದೆ ಈ ರೀತಿ ಕಿರುಕುಳ ಕೊಟ್ಟಿದ್ದಕ್ಕೆ ನಾನಾ ಪಾಟೇಕರ್ ಅವರ ಮಾತುಗಳನ್ನು ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರು ಕೂಡ ಕೇಳಿರಲಿಲ್ಲ. ಬಳಿಕ ತನುಶ್ರೀ ಅವರು ಚಿತ್ರದಿಂದ ಹೊರನಡೆದಿದ್ದರು. ಬಳಿಕ ರಾಖಿ ಸಾವಂತ್ ಆ ಹಾಡಿಗೆ ನಾನಾ ಪಾಟೇಕರ್ ಜೊತೆ ಹೆಜ್ಜೆ ಹಾಕಿದ್ದರು.

ತನುಶ್ರೀ ದತ್ತ ಅವರೇ ಬಾಲಿವುಡ್‍ನಲ್ಲಿ ಮೀ ಟೂ ಅಭಿಯಾನದಲ್ಲಿ ಮೊದಲು ಧ್ವನಿ ಎತ್ತಿದ ನಟಿಯಾಗಿದ್ದು, ಆ ನಂತರ ಬಹಳಷ್ಟು ನಟಿಯರು ತಮಗಾದ ಲೈಂಗಿಕ ಕಿರುಕುಳಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಆಗ ಬಾಲಿವುಡ್‍ನ ಹಿರಿಯ ಸ್ಟಾರ್ ನಟರ ಹೆಸರುಗಳು ಕೂಡ ಮೀಟೂ ಪ್ರಕರಣಗಳಲ್ಲಿ ಕೇಳಿಬಂದಿತ್ತು.

Leave a Reply

Your email address will not be published. Required fields are marked *