Connect with us

Crime

ದಿನ ಹಿಂಸೆ ನೀಡುತ್ತಿದ್ದಕ್ಕೆ ಡಬಲ್ ಮರ್ಡರ್ – 24 ಗಂಟೆಯಲ್ಲಿ ಕೊಲೆಗಾರನ ಬಂಧನ

Published

on

– ಕೊಲೆ ಮಾಡಿ ತಾನೇ ಪೊಲೀಸರಿಗೆ ಮಾಹಿತಿ ನೀಡಿದ್ದ

ಮಂಡ್ಯ: ಇಟ್ಟಿಗೆ ಕಾರ್ಖಾನೆಯಲ್ಲಿ ಮಲಗಿದ್ದ ಇಬ್ಬರು ಕಾರ್ಮಿಕರನ್ನು ಬರ್ಬರವಾಗಿ ಮಾರಕಾಸ್ತ್ರದಿಂದ ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ರಮೇಶ್ ಬಂಧಿತ ಆರೋಪಿ. ಈತ ಮಂಡ್ಯದ ಕಾಳೇನಹಳ್ಳಿಯಲ್ಲಿ ಸೆ.4ರಂದು ಬಸವರಾಜು ಮತ್ತು ರಾಮಮೂರ್ತಿ ಇಬ್ಬರನ್ನು ಕೊಲೆ ಮಾಡಿದ್ದನು. ಘಟನೆ ನಡೆದ 24 ಗಂಟೆಯಲ್ಲಿ ಮಂಡ್ಯದ ಗ್ರಾಮಾಂತರ ಪೊಲೀಸರು ಪ್ರಕರಣ ಭೇದಿಸಿ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಪ್ರಕರಣ?
ಸೆ.4ರಂದು ಮಂಡ್ಯ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಹೊರವಲಯದ ತೋಟದ ಮನೆ ಬಳಿ ಇದ್ದ ಇಟ್ಟಿಗೆ ಕಾರ್ಖಾನೆಯಲ್ಲಿ ಜೋಡಿ ಕೊಲೆ ನಡೆದಿತ್ತು. ಮಲಗಿದ್ದ ಇಬ್ಬರು ಕಾರ್ಮಿಕರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಬಸವರಾಜು ಮತ್ತು ತುಮಕೂರು ಮೂಲದ ರಾಮಮೂರ್ತಿ ಕಾರ್ಮಿಕರ ಬರ್ಬರ ಹತ್ಯೆಯಾಗಿತ್ತು. ಈ ಸಂಬಂಧ ಮಂಡ್ಯದ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಶೀಘ್ರವಾಗಿ ಕೊಲೆ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಮಂಡ್ಯದ ಗ್ರಾಮಾಂತರ ಠಾಣಾ ಪೊಲೀಸರು ಒಂದೇ ದಿನದಲ್ಲಿ ಜೋಡಿ ಕೊಲೆ ಆರೋಪಿಯನ್ನು ಸಾಕ್ಷಿ ಸಮೇತ ಬಂಧಿಸಿದ್ದಾರೆ. ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮತ್ತೊಬ್ಬ ಕಾರ್ಮಿಕ ಚಿಕ್ಕಮಗಳೂರು ಜಿಲ್ಲೆಯ ಕೋಡಿಹಳ್ಳಿ ಗ್ರಾಮದ ರಮೇಶ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ದಿನ ಈತ ಕೂಡ ಅವರ ಜೊತೆಯಲ್ಲಿ ಮಲಗಿದ್ದ. ಈತನೇ ಬೆಳಗ್ಗೆ ಪೊಲೀಸರಿಗೆ ಕೊಲೆ ನಡೆದಿರುವ ಬಗ್ಗೆ ಮಾಹಿತಿ ನೀಡಿದ್ದ.

ಬದುಕುಳಿದ್ದ ಈತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದನಂತೆ ಸತ್ಯ ಬಾಯ್ಬಿಟ್ಟಿದ್ದಾನೆ. ಆ ದಿನ ಕೊಲೆಯಾದ ಇಬ್ಬರಿಗೂ ಮದ್ಯ ಕುಡಿಸಿ ಮಲಗಿದ್ದಾಗ ಹಾರೆಯಿಂದ ಹಲ್ಲೆ ಮಾಡಿ ಸಾಯಿಸಿರುವುದಾಗಿ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾನೆ. ಈ ಹಿಂದೆ ಕೂಡ ಇಬ್ಬರು ಹಲವಾರು ಬಾರಿ ಮದ್ಯ ಸೇವಿಸಿ ಬಂದು ತನಗೆ ಕಿರುಕುಳ ನೀಡಿದ್ದರು. ಇದಕ್ಕಾಗಿ ನಾನು ಇವರನ್ನು ಕೊಲೆ ಮಾಡಿದೆ ಎಂದು ವಿಚಾರಣೆ ಒಪ್ಪಿಕೊಂಡಿದ್ದಾನೆ ಎಂದು ಮಂಡ್ಯ ಎಸ್‍ಪಿ ತಿಳಿಸಿದ್ದಾರೆ.

ಜೋಡಿ ಕೊಲೆ ಪ್ರಕರಣದಲ್ಲಿ ಮಂಡ್ಯದ ಗ್ರಾಮಾಂತರ ಪೊಲೀಸರು ಕೇವಲ ಒಂದೇ ದಿನದಲ್ಲಿ ಪ್ರಕರಣ ಭೇದಿಸಿ ಆರೋಪಿಯನ್ನು ಜೈಲಿಗಟ್ಟಿದ್ದಾರೆ. ಒಂದೇ ದಿನದಲ್ಲಿ ಪ್ರಕರಣ ಭೇದಿಸಿದ ಗ್ರಾಮಾಂತರ ಪೊಲೀಸರ ಕಾರ್ಯಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ತಮ್ಮ ಸಿಬ್ಬಂದಿ ಕೆಲಸವನ್ನು ಶ್ಲಾಘಿಸಿದ್ದಾರೆ.

Click to comment

Leave a Reply

Your email address will not be published. Required fields are marked *