Connect with us

ತಾಯಿ, ಮಗಳ ಮೇಲೆ ಅತ್ಯಾಚಾರ, ಕೊಲೆ- ಅಪರಾಧಿಗೆ ಮರಣದಂಡನೆ ಶಿಕ್ಷೆ

ತಾಯಿ, ಮಗಳ ಮೇಲೆ ಅತ್ಯಾಚಾರ, ಕೊಲೆ- ಅಪರಾಧಿಗೆ ಮರಣದಂಡನೆ ಶಿಕ್ಷೆ

ಲಕ್ನೋ: ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

ಉತ್ತರ ಪ್ರದೇಶದ ಅಜಾಮ್‍ಗಡ ಜಿಲ್ಲೆಯ ಮುಬಾರಕ್‍ಪುರದಲ್ಲಿ ಘಟನೆ ನಡೆದಿದ್ದು, ಪ್ರಕರಣ ಬೇಧಿಸಿದ್ದಕ್ಕೆ ಉತ್ತರ ಪ್ರದೇಶ ಸರ್ಕಾರ ಪೊಲೀಸರಿಗೆ ಹಾಗೂ ವಾದ ಮಂಡಿಸಿದ ವಕೀಲರ ತಂಡಕ್ಕೆ 1 ಲಕ್ಷ ರೂ. ಬಹುಮಾನ ಘೋಷಿಸಿದೆ. ಈ ಕುರಿತು ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಕುಮಾರ್ ಸ್ವಸ್ಥಿ ಮಾಹಿತಿ ನೀಡಿದ್ದು, ಪ್ರಕರಣವನ್ನು ತುಂಬಾ ಚೆನ್ನಾಗಿ ನಿರ್ವಹಿಸಿದ ಅಧಿಕಾರಿಗಳಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ್ದೇವೆ ಎಂದು ತಿಳಿಸಿದ್ದಾರೆ.

ಅಪರಾಧಿಯನ್ನು ನಜಿರುದ್ದಿನ್ ಅಲಿಯಾಸ್ ಪವ್ವಾ ಎಂದು ಗುರುತಿಸಲಾಗಿದ್ದು, 2019ರಲ್ಲಿ ಪ್ರಕರಣ ನಡೆದಿತ್ತು. ಯಾರೂ ಇಲ್ಲದ ವೇಳೆ ಮನೆಗೆ ನುಗ್ಗಿ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ರಾಕ್ಷಸ ರೀತಿಯಲ್ಲಿ ಅಪರಾಧಿ ಅತ್ಯಾಚಾರ ಎಸಗಿದ್ದ. ಅಲ್ಲದೆ ಮಹಿಳೆಯ ಪತಿ ಹಾಗೂ ಅವರ 4 ತಿಂಗಳ ಕೂಸನ್ನು ಸಹ ಕೊಲೆ ಮಾಡಿದ್ದ.

ಪ್ರಕರಣದ ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯ ಬುಧವಾರ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ಪ್ರಕಟಿಸಿದೆ. ಅಲ್ಲದೆ ನ್ಯಾಯಾಲಯವು 9 ಲಕ್ಷ ರೂ.ಗಳ ದಂಡವನ್ನು ಸಹ ವಿಧಿಸಿದೆ. ನ್ಯಾಯಾಲಯವು 66 ಪುಟಗಳ ತೀರ್ಪಿನಲ್ಲಿ ಘಟನೆಯನ್ನು ಭಯಾನಕ, ಅಮಾನವೀಯ ಹಾಗೂ ಅಪರೂಪದಲ್ಲಿ ಅಪರೂಪವಾದ ಕೃತ್ಯ ಎಂದು ಹೇಳಿದೆ.

Advertisement
Advertisement