Wednesday, 19th February 2020

Recent News

ಒಕ್ಕಲಿಗರಿಗೆ ಜಮೀನು ಹೆಚ್ಚಿರುತ್ತದೆ, ಮೌಲ್ಯ ಹೆಚ್ಚಾಗಿದ್ದರಿಂದ ಅಕ್ರಮ ಹೇಗಾಗುತ್ತೆ – ಸಿಂಘ್ವಿ ವಾದ

ನವದೆಹಲಿ: ನ್ಯಾಯಾಂಗ ಬಂಧನದಲ್ಲಿರುವ ಡಿಕೆ ಶಿವಕುಮಾರ್ ಜಾಮೀನು ಅರ್ಜಿಯ ವಿಚಾರಣೆ ಗುರುವಾರಕ್ಕೆ ಮುಂದೂಡಿಕೆಯಾಗಿದೆ.

ಇಂದು ಮಧ್ಯಾಹ್ನ 3.30ಕ್ಕೆ ರೋಸ್ ಅವೆನ್ಯೂ ನ್ಯಾಯಾಲಯ ಸಮುಚ್ಚಯದ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಬೇಕಿತ್ತು. ಆದರೆ ಇಡಿ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ನಟರಾಜ್ ಸರಿಯಾದ ಸಮಯಕ್ಕೆ ಆಗಮಿಸಿರಲಿಲ್ಲ. ಕೊನೆಗೆ ನಟರಾಜ್ ಗೈರಲ್ಲಿ ಮಧ್ಯಾಹ್ನ 3.45ಕ್ಕೆ ಜಾಮೀನು ಅರ್ಜಿಯ ವಿಚಾರಣೆ ಆರಂಭವಾಯಿತು.

ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿ, ಮಗಳು ಐಶ್ವರ್ಯ ಹೆಸರಿನಲ್ಲಿರುವ 108 ಕೋಟಿ ಆಸ್ತಿ ಸಾಲದಲ್ಲಿದೆ. ಸ್ನೇಹಿತರ ಜೊತೆ ಬ್ಯಾಂಕ್ ಗಳು ಇದಕ್ಕೆ ಸಾಲ ನೀಡಿವೆ. ಇದನ್ನು ಅಕ್ರಮ ಹಣ ಎಂದು ಹೇಗೆ ಹೇಳುತ್ತೀರಿ. ಚುನಾವಣಾ ಆಯೋಗಕ್ಕೆ ಶಿವಕುಮಾರ್ ಈ ಎಲ್ಲ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ತಪ್ಪು ಮಾಹಿತಿ ನೀಡಿದರೆ ಶಾಸಕ ಸ್ಥಾನದಿಂದ ಅನರ್ಹರಾಗುತ್ತಾರೆ. ಮಾರುಕಟ್ಟೆ ಮೌಲ್ಯ ಹೆಚ್ಚಳವಾದ ಹಿನ್ನೆಲೆಯಲ್ಲಿ ಆಸ್ತಿ ಮೌಲ್ಯ ಹೆಚ್ಚಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು.

ಶಿವಕುಮಾರ್ ಒಕ್ಕಲಿಗ ಸಮುದಾಯದವರಾಗಿದ್ದು, ಕರ್ನಾಟಕದಲ್ಲಿ ಸಾಧಾರಣವಾಗಿ ಒಕ್ಕಲಿಗರಿಗೆ ಜಮೀನು ಹೆಚ್ಚಾಗಿರುತ್ತದೆ. ಒಕ್ಕಲಿಗರಿಗೆ ಕೃಷಿಯೇ ಪ್ರಧಾನವಾದ ಉದ್ಯೋಗವಾಗಿದೆ. ಈ ಕಾರಣಕ್ಕೆ ಕೃಷಿ ಆದಾಯ ಹೆಚ್ಚಿದ್ದು, ಜಮೀನು ಮೌಲ್ಯ ಹೆಚ್ಚಾಗುತ್ತಾ ಹೋಗುತ್ತದೆ. ಇದನ್ನು ಅಕ್ರಮ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಈ ವೇಳೆ ದೆಹಲಿ ಸುತ್ತಮುತ್ತಲಿನ ಪ್ರದೇಶಗಳ ಮೌಲ್ಯಗಳ ಹೆಚ್ಚಳದ ಬಗ್ಗೆ ಉದಾಹರಣೆ ನೀಡಿದ ಅವರು ಮೊದಲು ಮೌಲ್ಯ ಲಕ್ಷದಲ್ಲಿತ್ತು. ಆಮೇಲೆ 8 ಕೋಟಿಗೆ ಏರಿಕೆ ಆಗಿದ್ದು, ಇನ್ನು ಮತ್ತಷ್ಟು ಏರಿಕೆ ಆಗಬಹುದು ಎಂದು ತಿಳಿಸಿದರು.

ಶರ್ಮಾ ಟ್ರಾವೆಲ್ಸ್ 50 ವರ್ಷದ ಹಳೆಯದಾಗಿದ್ದು, ಶರ್ಮಾ ಅವರ ಸಾವಿನ ಬಳಿಕ ಸುನೀಲ್ ಶರ್ಮಾ ವ್ಯವಹಾರ ನಡೆಸುತ್ತಿದ್ದಾರೆ. ಸುನಿಲ್ ಶರ್ಮಾ ಅವರ ಚಾಲಕ ರಾಜೇಂದ್ರ ಮನೆಗೆ ದಾಳಿಯಾದಾಗ ಸಿಕ್ಕಿದ ಡೈರಿಯಲ್ಲಿ ಅಂಕಿ ಅಂಶ ಸಿಕ್ಕಿರಬಹುದು. ಆದರೆ ಆ ಡೈರಿಯಲ್ಲಿ ಉಲ್ಲೇಖಿಸಲಾದ ಹಣ ಅಕ್ರಮಲ್ಲ. ಶರ್ಮಾ ಅವರ ಬಳಿ 150-200 ಬಸ್ಸುಗಳು ಇದೆ. ವ್ಯವಹಾರದ ರೂಪದಲ್ಲಿ ಬರೆಯಲಾದ ಅಂಕಿ ಸಂಖ್ಯೆಗಳನ್ನು ಡಿಕೆ ಶಿವಕುಮಾರ್ ಅವರ ಅಕ್ರಮ ಹಣ ಎಂದು ಪರಿಗಣಿಸಲು ಸಾಧ್ಯವಿಲ್ಲ. ಸಚಿನ್ ನಾರಾಯಣ್ ಮತ್ತು ಸುನಿಲ್ ಶರ್ಮಾ ಇಬ್ಬರೂ ತೆರಿಗೆ ಕಟ್ಟುತ್ತಾರೆ. ಸಚಿನ್ ನಾರಾಯಣ್ ಉದ್ಯಮಿಯಾಗಿ ಪ್ರಸಿದ್ಧಿ ಪಡೆದಿದ್ದು 30 ಮದ್ಯದ ಅಂಗಡಿಗಳಿವೆ ಎಂದು ತಿಳಿಸಿದರು.

ವಿಚಾರಣೆಗೆ ನಟರಾಜ್ ಅವರು ಗೈರಾದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಬೇಕೆಂದು ಇಡಿ ಪರ ವಕೀಲರು ಮನವಿ ಮಾಡಿದರು. ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಸಿಂಘ್ವಿ ವಿಚಾರಣೆಯನ್ನು ಮುಂದೂಡಬಾರದು ಎಂದು ಕೇಳಿಕೊಂಡರು. ಕೊನೆಗೆ ನ್ಯಾ. ಅಜಯ್ ಕುಮಾರ್ ಕುಹಾರ್ ಜಾಮೀನು ಅರ್ಜಿಯ ವಿಚಾರಣೆಯನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

ವಿಚಾರಣೆ ಮುಂದೂಡಿದ ಬಳಿಕ 4.16ರ ವೇಳೆಗೆ ಕೋರ್ಟ್ ಹಾಲ್ ನತ್ತ ಇಡಿ ಪರ ವಕೀಲ ಕೆ.ಎಂ ನಟರಾಜ್ ಆಗಮಿಸಿದರು. ಈ ವೇಳೆ ವಿಚಾರಣೆ ಗುರುವಾರಕ್ಕೆ ಮುಂದೂಡಿಕೆಯಾದ ವಿಚಾರವನ್ನು ಇಡಿ ಅಧಿಕಾರಿಗಳು ನಟರಾಜ್ ಅವರಿಗೆ ತಿಳಿಸಿದರು.

ನಿನ್ನೆ ನ್ಯಾ. ಅಜಯ್ ಕುಮಾರ್ ಕುಹಾರ್ ಅವರು ಡಿಕೆ ಶಿವಕುಮಾರ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಪ್ರಕಟಿಸಿದ್ದರು. ತಮ್ಮ ಆದೇಶದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಕೂಡಲೇ ಆರ್‍ಎಂಎಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು. ವೈದ್ಯರು ಗುಣಮುಖರಾಗಿದ್ದಾರೆ ಎಂದು ತಿಳಿಸಿದರೆ ಶಿವಕುಮಾರ್ ಅವರನ್ನು ತಿಹಾರ್ ಜೈಲಿಗೆ ಕಳುಹಿಸಬಹುದು ಎಂದು ಸೂಚಿಸಿದ್ದರು.

Leave a Reply

Your email address will not be published. Required fields are marked *