Connect with us

Latest

ಬ್ಯಾಂಕ್‍ನಲ್ಲಿ 80 ಲಕ್ಷ ಹಣವಿದ್ದರೂ ಡ್ರಾ ಮಾಡಲಾಗದೆ ತಂದೆಯನ್ನು ಕಳೆದುಕೊಂಡ ಪುತ್ರ

Published

on

ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕ್‍ನ ಮೇಲೆ ಆರ್.ಬಿ.ಐ ನಿರ್ಬಂಧ ಹೇರಿದ ಕಾರಣದಿಂದ ತನ್ನ ಬ್ಯಾಂಕ್ ಖಾತೆಯಲ್ಲಿ ಇದ್ದ ಹಣವನ್ನು ತೆಗೆದುಕೊಳ್ಳಲಾಗದೆ ಮಗನೊಬ್ಬ ತನ್ನ ತಂದೆಯನ್ನು ಕಳೆದುಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಪ್ರೇಮ್ ಧಾರಾ ಎಂಬವರು ಪಿಎಂಸಿ ಬ್ಯಾಂಕ್‍ನಲ್ಲಿ ಖಾತೆ ಹೊಂದಿದ್ದು, ಅದರಲ್ಲಿ 80 ಲಕ್ಷ ರೂ. ಹಣ ಇಟ್ಟಿದ್ದರು. ಈ ನಡುವೆ ಅವರ ತಂದೆ ಮುರಳೀಧರ್ ಧಾರಾಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು.

ತಂದೆ ಮುರಳೀಧರ್ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆ ಪ್ರೇಮ್ ದಾಖಲು ಮಾಡಿದ್ದು, ವೈದ್ಯರು ನಿಮ್ಮ ತಂದೆಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ನೀವು ಮುಂಗಡವಾಗಿ ಹಣ ಕಟ್ಟಬೇಕು ಎಂದು ಹೇಳಿದ್ದಾರೆ. ಈ ವೇಳೆ ಅಕ್ರಮ ಹಣಕಾಸು ವಹಿವಾಟು ಹಿನ್ನೆಲೆ ಆರ್.ಬಿ.ಐ ಪಿಎಂಸಿ ಬ್ಯಾಂಕ್‍ನಲ್ಲಿ ಹಣದ ವಾಹಿವಾಟಿನ ಮೇಲೆ ನಿರ್ಬಂಧ ಹೇರಿದ ಕಾರಣ ಇವರಿಗೆ ಹಣ ಡ್ರಾ ಮಾಡಲು ಆಗಿಲ್ಲ.

ಆರ್.ಬಿ.ಐ ನಿರ್ಬಂಧ ಹೇರಿದ ಕಾರಣ ಪ್ರೇಮ್ ಅವರು ಕೇವಲ 40 ಸಾವಿರವನ್ನು ಮಾತ್ರ ಡ್ರಾ ಮಾಡಿದ್ದಾರೆ. ಕೈಯಲ್ಲಿ ಹಣವಿದ್ದರು ಅದನ್ನು ಡ್ರಾ ಮಾಡಲಾಗದೆ ಪ್ರೇಮ್ ಧಾರಾ ಕಷ್ಟಪಟ್ಟಿದ್ದಾರೆ. ಈ ವೇಳೆ ತೀವ್ರ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಅವರ ತಂದೆ ಮುರುಳೀಧರ್ ಇಂದು ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.

ಎರಡು ದಿನದ ಹಿಂದೆ ಪಿಎಂಸಿ ಬ್ಯಾಂಕ್‍ನಲ್ಲಿ 90 ಲಕ್ಷ ಇಟ್ಟಿದ್ದ 51 ವರ್ಷದ ಸಂಜಯ್ ಗುಲಾಟಿ ಅವರು ತಮ್ಮ ಮಗನ ಶಸ್ತ್ರಚಿಕಿತ್ಸೆಗೆ ಹಣವನ್ನು ಡ್ರಾ ಮಾಡಲು ಆಗಿಲ್ಲ ಎಂದು ಮನನೊಂದು ಇದೇ ಕಾರಣದಿಂದ ಹೃದಯಾಘಾತವಾಗಿ ಸಾವನ್ನಪ್ಪಿದ್ದರು.