Wednesday, 16th October 2019

Recent News

ಹಿಟ್ಲರ್ ಹಾದಿಯಲ್ಲೇ ಮೋದಿ ನಡೆ: ಕೇಜ್ರಿವಾಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಹಾದಿಯಲ್ಲಿ ನಡೆಯುತ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಗುರುಗ್ರಾಮದ ಧಾಮಸ್‍ಪುರದ ಘಟನೆಯನ್ನು ಪ್ರಸ್ತಾಪಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಅರವಿಂದ್ ಕೇಜ್ರಿವಾಲ್ ಕಿಡಿಕಾರಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?:
ಸರ್ವಾಧಿಕಾರಿ ಹಿಟ್ಲರ್‍ನ ಗೂಂಡಾಗಳು ಮುಗ್ಧ ಜನರ ಮೇಲೆ ಹಲ್ಲೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಅವರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಹಿಟ್ಲರ್ ನಂತೆ ಮಾಡುತ್ತಿದ್ದಾರೆ. ಅಧಿಕಾರಕ್ಕೆ ಬರಲು ಮೋದಿ ಹಿಟ್ಲರ್ ನನ್ನು ಅನುಸರಿಸುತ್ತಿದ್ದಾರೆ. ಆದರೆ ಮೋದಿ ಬೆಂಬಲಿಸುವ ಜನರಿಗೆ ಭಾರತ ಯಾವ ಸ್ಥಿತಿಗೆ ಹೋಗುತ್ತಿದೆ ಎನ್ನುವುದು ಕಾಣುತ್ತಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಅಸಮಾಧಾನ ಹೊರ ಹಾಕಿದ್ದಾರೆ.

ತಮ್ಮ ಟ್ವೀಟ್‍ನಲ್ಲಿ ಒಂದು ವಿಡಿಯೋ ಲಿಂಕ್ ಹಾಕಿರುವ ಅರವಿಂದ್ ಕೇಜ್ರಿವಾಲ್ ಅವರು, ಈ ವೀಡಿಯೊ ವೀಕ್ಷಿಸಿ. ಹಿಂದೂ ಧರ್ವದ ಯಾವ ಗ್ರಂಥಗಳಲ್ಲಿ ಮುಸ್ಲಿಮರನ್ನು ಕೊಲ್ಲುವಂತೆ ಬರೆಯಲಾಗಿದೆ? ಭಗವತ್ ಗೀತೆಯಲ್ಲಿ? ರಾಮಾಯಣದಲ್ಲಿ? ಚಾಲಿಸ್ ಹನುಮಾನ್‍ದಲ್ಲಿ? ಹಾಗಾದರೇ ಯಾವ ಗ್ರಂಥದಲ್ಲಿದೆ ಹೇಳಿ ಎಂದು ಪ್ರಶ್ನಿಸಿದ್ದಾರೆ.

ಈ ಜನರು ಹಿಂದೂಗಳಲ್ಲ, ಹಿಂದೂಗಳ ಉಡುಪಿನಲ್ಲಿರುವ ಗೂಂಡಾಗಳು. ಅವರ ಪಕ್ಷವು ದುರ್ಬಲಗೊಂಡಾಗ ಹೀಗೆ ಮಾಡುತ್ತಾರೆ. ದೇಶ ಮತ್ತು ಹಿಂದೂ ಧರ್ಮವನ್ನು ಉಳಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯವಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಧಾಮಸ್‍ಪುರದಲ್ಲಿ ಆಗಿದ್ದೇನು?:
ಹರಿಯಾಣದ ಧಾಮಸ್‍ಪುರದಲ್ಲಿ ಮಕ್ಕಳು ಮನೆಯ ಎದುರು ಕ್ರಿಕೆಟ್ ಆಡುತ್ತಿದ್ದರು. ಆದರೆ ಅದಕ್ಕೆ ಅಡ್ಡಿಪಡಿಸಿದ ಸ್ಥಳೀಯರು, ಪಾಕಿಸ್ತಾನಕ್ಕೆ ಹೋಗಿ ಆಟವಾಡಿ ಎಂದು ಹೇಳಿದ್ದರು ಎನ್ನಲಾಗಿದೆ.

ಸ್ಥಳೀಯರು ಹೇಳಿದ ಬಳಿಕವೂ ಮಕ್ಕಳು ಆಟ ಮುಂದುವರಿಸಿದ್ದರು. ಇದರಿಂದಾಗಿ ಕೋಪಗೊಂಡ ಸ್ಥಳೀಯ ಬಲಪಂಥೀಯ ಯುವಕರ ಗುಂಪೊಂದು ಮಕ್ಕಳ ಕುಟುಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಮಹಿಳೆ ರಕ್ಷಣೆಗೆ ಬಂದರೂ ಲೆಕ್ಕಿಸದೇ ಹಾಕಿ ಸ್ಟಿಕ್, ರಾಡ್‍ಗಳಿಂದ ಹೊಡೆದಿದ್ದಾರೆ. ಮನೆಯ ಮಹಡಿಯ ಮೇಲಿದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್‍ನಲ್ಲಿ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *