Connect with us

International

ಮಾನವೀಯತೆಯ ಶತ್ರುಗಳ ವಿರುದ್ಧ ಧ್ವನಿ ಎತ್ತಲು ಭಾರತ ಹಿಂಜರಿಯಲ್ಲ- ಚೀನಾ, ಪಾಕ್‍ಗೆ ಮೋದಿ ಟಾಂಗ್

Published

on

ನವದೆಹಲಿ: ಭಾರತ ವಸುದೈವ ಕುಟುಂಬ ಎಂಬ ನಿಯಮ ಪಾಲಿಸುತ್ತದೆ. ಹೀಗಾಗಿ ಇಡೀ ವಿಶ್ವವನ್ನೇ ಒಂದು ಕುಟುಂಬವೆಂದು ಪರಿಗಣಿಸಿದೆ. ಶಾಂತಿಯನ್ನು ಕಾಪಾಡುವುದು ನಮ್ಮ ಉದ್ದೇಶವಾಗಿದೆ. ಅದೇ ರೀತಿ ಮನವೀಯತೆಯ ಶತ್ರುಗಳ ವಿರುದ್ಧ ಧ್ವನಿ ಎತ್ತಲು ಹಿಂಜರಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವೈರಿ ರಾಷ್ಟ್ರಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಶ್ವಸಂಸ್ಥೆಯ 75ನೇ ಸಾಮಾನ್ಯ ಅಧಿವೇಶನ(ಯುಎನ್‍ಜಿಎ)ದಲ್ಲಿ ಮಾತನಾಡಿದ ಅವರು, ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ನಾವೂ ಒಬ್ಬರು ಎಂಬುದರ ಕುರಿತು ಭಾರತಕ್ಕೆ ಹೆಮ್ಮೆ ಇದೆ. ಈ ಐತಿಹಾಸಿಕ ಸಂದರ್ಭದಲ್ಲಿ ಭಾರತದ 130 ಕೋಟಿ ಜನರ ಭಾವನೆಗಳನ್ನು ಹಂಚಿಕೊಳ್ಳಲು ಜಾಗತಿಕ ವೇದಿಕೆಗೆ ಬಂದಿದ್ದೇನೆ. ವಿಶ್ವಸಂಸ್ಥೆಯ ಸುಧಾರಣೆಗಳು ಪೂರ್ಣಗೊಳ್ಳುವ ಪ್ರಕ್ರಿಯೆಗಾಗಿ ಭಾರತದ ಜನ ತುಂಬಾ ಸಮಯದಿಂದ ಕಾಯುತ್ತಿದ್ದಾರೆ ಎಂದು ಇದೇ ವೇಳೆ ಹೇಳಿದರು.

ಕಳೆದ 75 ವರ್ಷಗಳಲ್ಲಿ ವಿಶ್ವಸಂಸ್ಥೆ ಕಾರ್ಯಕ್ಷಮತೆ ಬಗ್ಗೆ ವಸ್ತುನಿಷ್ಠ ಮೌಲ್ಯಮಾಪನ ಮಾಡಿದ್ದೇವೆ. ಹಲವು ನಾಕ್ಷತ್ರಿಕ ಸಾಧನೆಗಳನ್ನು ನೋಡಿದ್ದೇವೆ. ಆದರೆ ಇದೇ ಸಮಯದಲ್ಲಿ ವಿಶ್ವಸಂಸ್ಥೆಯ ಕೆಲಸದ ಬಗ್ಗೆ ಗಂಭೀರವಾದ ಆತ್ಮಾವಲೋಕನದ ಅಗತ್ಯವಿದೆ. ಕಳೆದ 8-9 ತಿಂಗಳಿಂದ ಇಡೀ ಜಗತ್ತು ಕೊರೊನಾ ವೈರಸ್ ಎದುರಿಸುತ್ತಿದೆ. ಸಾಂಕ್ರಾಮಿಕ ರೋಗದ ವಿರುದ್ಧದ ಜಂಟಿ ಹೋರಾಟದಲ್ಲಿ ವಿಶ್ವಸಂಸ್ಥೆ ಎಲ್ಲಿದೆ? ಇದರ ಪರಿಣಾಮಕಾರಿ ಪ್ರತಿಕ್ರಿಯೆ ಎಲ್ಲಿದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ವಿಶ್ವಸಂಸ್ಥೆಯ ಸುಧಾರಣೆಗಳು ಪೂರ್ಣಗೊಳ್ಳುವುದನ್ನು ಭಾರತ ತುಂಬಾ ಸಮಯದಿಂದ ಕಾಯುತ್ತಿದೆ. ಈ ಸುಧಾರಣಾ ಪ್ರಕ್ರಿಯೆ ಕುರಿತು ಯಾವಾಗ ತಾರ್ಕಿಕ ತೀರ್ಮಾನ ಕೈಗೊಳ್ಳುತ್ತದೆ ಎಂದು ಭಾರತದ ಜನತೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ವಿಶ್ವಸಂಸ್ಥೆಯ ನಿರ್ಧಾರ ಕೈಗೊಳ್ಳುವ ವಿಭಾಗದಿಂದ ಭಾರತವನ್ನು ಇನ್ನೂ ಎಷ್ಟು ದಿನ ದೂರವಿಡಲಾಗುವುದು ಎಂದು ಶಾಶ್ವತ ಸದಸ್ಯತ್ವದ ಕುರಿತು ಮೋದಿ ಗುಡುಗಿದ್ದಾರೆ.

ನಾವು ಬಲಶಾಲಿಯಾಗಿದ್ದಾಗ ಎಂದಿಗೂ ಜಗತ್ತಿಗೆ ಬೆದರಿಕೆ ಹಾಕಿಲ್ಲ. ಅದೇ ರೀತಿ ದುರ್ಬಲರಾಗಿದ್ದಾಗ ಸಹ ಎಂದೂ ವಿಶ್ವಕ್ಕೆ ಹೊರೆಯಾಗಿಲ್ಲ. ಒಂದು ದೇಶದಲ್ಲಿ ಆಗುತ್ತಿರುವ ಪರಿವರ್ತನೆ, ಬದಲಾವಣೆಗಳು ವಿಶ್ವದ ಬಹುಪಾಲು ಭಾಗದ ಮೇಲೆ ಪರಿಣಾಮ ಬೀರುವಾಗ ಒಂದು ದೇಶ ಎಷ್ಟು ಸಮಯ ಕಾಯಬೇಕು. ಭಾರತವು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ಧೈರ್ಯಶಾಲಿ ಸೈನಿಕರನ್ನು ಕಳೆದುಕೊಂಡಿದೆ. ಇಂದು ಪ್ರತಿಯೊಬ್ಬ ಭಾರತೀಯನು ಯುಎನ್‍ಗೆ ಭಾರತದ ಕೊಡುಗೆಯನ್ನು ನೋಡಿದಾಗ ವಿಶ್ವಸಂಸ್ಥೆಯಲ್ಲಿ ಭಾರತದ ವಿಸ್ತೃತ ಪಾತ್ರವನ್ನು ಆಶಿಸುತ್ತಿದ್ದಾನೆ ಎಂದು ಮೋದಿ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *