Connect with us

Latest

ಮೆಗಾ ರೋಡ್‍ಶೋ ಬಳಿಕ ಮೋದಿಯಿಂದ ಗಂಗಾರತಿ

Published

on

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ವಾರಣಾಸಿಯಲ್ಲಿ ಮೆಗಾ ರೋಡ್ ಶೋ ನಡೆಸಿದ ಬಳಿಕ ರಾತ್ರಿ 8 ಗಂಟೆಯ ವೇಳೆಗೆ ಕಾಶಿಯ ದಶಾಶ್ವಮೇಧ ಘಾಟ್‍ನಲ್ಲಿ ಗಂಗಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉಪಸ್ಥಿತರಿದ್ದರು.

ಬನಾರಸ್ ಹಿಂದೂ ವಿವಿಗೆ ತೆರಳಿ ಪಂಡಿತ್ ಮದನ್ ಮೋಹನ್ ಮಾಳವೀಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕಾಶಿಯ ಬೀದಿಗಳಲ್ಲಿ ಕೇಸರಿ ಕಹಳೆಯೊಂದಿಗೆ ಮೋದಿ 6 ಕಿ.ಮೀ ಮಹಾ ರೋಡ್ ಶೋ ನಡೆಸಿ ಗಂಗೆಯ ತಟಕ್ಕೆ ಆಗಮಿಸಿದರು.

ರೋಡ್ ಶೋ ವೇಳೆ ಲಂಕಾ ಘಾಟ್, ಅಸ್ಸಿ ಘಾಟ್, ಸೋನಾರ್‍ಪುರ, ಮದನಪುರ್ ಮಾರ್ಗವಾಗಿ ಸಾಗಿದ ಮೆರವಣಿಗೆಯ ರಸ್ತೆಯ ಇಕ್ಕೆಲ್ಲಗಳಲ್ಲೂ ಪುಷ್ಪವೃಷ್ಟಿ ಆಯಿತು. ಕಣ್ಣು ಹಾಯಿಸಿದ ದೂರವೂ ಜಮಾಯಿಸಿ ತಮ್ಮ ಪ್ರೀತಿ, ಅಭಿಮಾನವನ್ನು ಲಕ್ಷಾಂತರ ಅಭಿಮಾನಿಗಳು ತೋರಿಸಿದರು. ಎಲ್ಲ ಕಡೆ “ಹರ್ ಹರ್ ಮೋದಿ, ಘರ್ ಘರ್ ಮೋದಿ” ಜೈಕಾರ ಕೇಳಿಸುತಿತ್ತು.

ಗಂಗಾರತಿ ವಿಶೇಷತೆ ಏನು?
ಭೂಲೋಕದಲ್ಲಿ ಎಲ್ಲಿ ನೆಲೆಸಲು ಬಯಸ್ತೀಯಾ ಎಂದು ಶಿವ ಕೇಳಿದಾಗ, ಪವಿತ್ರ ಪರಿಶುದ್ಧ ಪಾವನೆ ಗಂಗೆಯ ತಟವಾದ ವಾರಾಣಸಿಯನ್ನು ಪಾರ್ವತಿ ಆಯ್ಕೆ ಮಾಡಿಕೊಂಡು ಎಂದು ಪುರಾಣ ಹೇಳುತ್ತದೆ.

ಮೂರು ಜನ್ಮಗಳ ಪಾಪ ಕಳೆದುಕೊಳ್ಳಲು ಗಂಗಾರತಿ ಪೂಜೆ ಮಾಡಲಾಗುತ್ತದೆ. ಪಂಚಭೂತಗಳ ಸಂಕೇತವಾಗಿ ಈ ಆರತಿ ನಡೆಯುತ್ತದೆ. ಒಂದು ಕಡೆ 5 ಅರ್ಚಕರು, ಇನ್ನೊಂದು ಕಡೆ 7 ಅರ್ಚಕರು ಆರತಿ ಮಾಡುತ್ತಾರೆ. ಸಪ್ತ ಋಷಿಗಳು ಗಂಗಾರತಿ ಮಾಡಿದ್ದರು ಎನ್ನುವುದರ ಪ್ರತೀಕವಾಗಿ 7 ಆರತಿ ಮಾಡಲಾಗುತ್ತದೆ. ಸಾವಿರಾರು ವರ್ಷಗಳಿಂದ ವಂಶಪಾರಂಪರ್ಯವಾಗಿ ನಡೆದುಕೊಂಡು ಬಂದ ಪದ್ಧತಿ ಇದಾಗಿದೆ.

ಗುರುವಾರ ರಾತ್ರಿ ವಾರಣಾಸಿಯಲ್ಲಿ ವಾಸ್ತವ್ಯ ಹೂಡಲಿರುವ ಪ್ರಧಾನಿ ಮೋದಿ ಶುಕ್ರವಾರ ಬೆಳಗ್ಗೆ ನಾಮಪತ್ರ ಪತ್ರ ಸಲ್ಲಿಸಲ್ಲಿದ್ದಾರೆ. ಬೆಳಗ್ಗೆ 9.30ಕ್ಕೆ ಬೂತ್ ಮಟ್ಟದ ಕಾರ್ಯಕರ್ತರ ಉದ್ದೇಶಿಸಿ ಭಾಷಣ ಮಾಡಿದ ಬಳಿಕ ಬೆಳಗ್ಗೆ 11.30 ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆಯ ವೇಳೆ ನಿತಿಶ್ ಕುಮಾರ್, ಉದ್ಧವ್ ಠಾಕ್ರೆ, ಅಣ್ಣಾಡಿಎಂಕೆಯ ನಾಯಕರು ಸೇರಿದಂತೆ ಎನ್‍ಡಿಎ ಮಿತ್ರಪಕ್ಷಗಳ ಮುಖಂಡರು ಸಾಥ್ ನೀಡಲಿದ್ದಾರೆ.