Tuesday, 17th September 2019

Recent News

ಸರ್ಜಿಕಲ್ ಬೆನ್ನಲ್ಲೇ ಮೋದಿಯಿಂದ ಕರ್ನಾಟಕದಲ್ಲಿ ಪೊಲಿಟಿಕಲ್ ಸ್ಟ್ರೈಕ್..!

– ಮಾಹಿತಿ ತಿಳಿಯುತ್ತಿದ್ದಂತೆ ಸಿಎಂರಿಂದ ಶಾಸಕರ ದಿಢೀರ್ ಭೇಟಿ

ಬೆಂಗಳೂರು: ಸರ್ಜಿಕಲ್ ಸ್ಟ್ರೈಕ್ ಬೆನ್ನಲ್ಲೇ ಪ್ರಧಾನಿ ಮೋದಿಯಿಂದ ಪೊಲಿಟಿಕಲ್ ಸ್ಟ್ರೈಕ್ ನಡೆದಿದ್ದು, ಈ ಮೂಲಕ ಪ್ರಧಾನಿಯವರು ಖರ್ಗೆ ಜೊತೆ ಮೈತ್ರಿ ಸರ್ಕಾರಕ್ಕೂ ಖೆಡ್ಡಾ ತೋಡೋಕೆ ಮುಂದಾಗಿದ್ದಾರೆಯಾ ಎಂಬ ಪ್ರಶ್ನೆ ಇದೀಗ ಎದ್ದಿದೆ.

ಹೌದು. ಪ್ರಧಾನಿಯವರೇ ಸದ್ದಿಲ್ಲದೇ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಬಿಜೆಪಿಗೆ ಉಮೇಶ್ ಜಾಧವ್ ಅವರು ಸೇರ್ಪಡೆಯಾದ ಬೆನ್ನಲ್ಲೇ ಬಿಜೆಪಿ `ಮೌನ ಆಪರೇಷನ್’ ನಡೆಸಿದ್ದು, ನಾಳೆ ಆಪರೇಷನ್ ಕಮಲದ ಬ್ಲೂ ಪ್ರಿಂಟ್ ಕೂಡ ಸಿದ್ಧವಾಗಿತ್ತು. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ನಾಳೆ ಒಂದಷ್ಟು ಬೆಳವಣಿಗೆಗಳು ನಡೆಯುವುದಿತ್ತು. ಈ ಮಾಹಿತಿ ಸರ್ಕಾರಕ್ಕೆ ಲಭ್ಯವಾಗುತ್ತಿದ್ದಂತೆ ಸಿಎಂ ಕುಮಾರಸ್ವಾಮಿ ಅವರೇ ಅತೃಪ್ತ ಶಾಸಕರ ಜೊತೆ ಮಾತನಾಡಿ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ.

ಏನಿದು ಆಪರೇಷನ್ ಬ್ಲೂಪ್ರಿಂಟ್..?
ಮೂವರು ಕಾಂಗ್ರೆಸ್ ಶಾಸಕರು ನಾಳೆ ರಾಜೀನಾಮೆ ನೀಡಲು ಸಿದ್ಧರಾಗಿದ್ದರು. ಈ ಮೂವರು ಕೂಡ ಉಮೇಶ್ ಜಾಧವ್ ಅವರ ಜೊತೆಗೆ ರಾಜೀನಾಮೆ ನೀಡುವವರಿದ್ದರು. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಬಳ್ಳಾರಿ ಶಾಸಕ ನಾಗೇಂದ್ರ ಹಾಗೂ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೂಡ ರಾಜೀನಾಮೆ ನೀಡಲು ಪ್ಲಾನ್ ಮಾಡಿದ್ದರು. ಈ ಶಾಸಕರನ್ನು ಸೆಳೆಯಲು ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಆಫರ್ ಕೂಡ ಕೊಟ್ಟಿತ್ತು.

ರಮೇಶ್ ಜಾರಕಿಹೊಳಿಯವರಿಗೆ ಚಿಕ್ಕೋಡಿಯಿಂದ ಟಿಕೆಟ್ ನೀಡುವ ಭರವಸೆ ಕೊಟ್ರೆ, ಬಳ್ಳಾರಿಯಿಂದ ನಾಗೇಂದ್ರ ಸಹೋದರ ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ನೀಡುವುದಾಗಿ ಬಿಜೆಪಿ ಹೇಳಿತ್ತು. ಇದಕ್ಕೆ ಮೂವರು ಶಾಸಕರು ಕೂಡ ಒಪ್ಪಿಗೆ ಸೂಚಿಸಿದ್ದು, ಈ ಮಾತುಕತೆ ಹಿನ್ನೆಲೆಯಲ್ಲಿ ನಾಳೆ ರಾಜೀನಾಮೆ ನೀಡುವ ತೀರ್ಮಾನಕ್ಕೆ ಮುಂದಾಗಿದ್ದರು.

ಸಿಎಂ ಮನವೊಲಿಕೆ:
ಈ ಮಾಹಿತಿ ತಿಳಿಯುತಿದ್ದಂತೆಯೇ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ಸ್ವತಃ ತಾವೇ ಕಾರ್ಯಾಚರಣೆಗೆ ಇಳಿದಿದ್ದಾರೆ. ಹೀಗಾಗಿ ಕೂಡಲೇ ಸಿಎಂ ಅವರು ದಿಢೀರ್ ಆಗಿ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮೂವರು ಶಾಸಕರನ್ನು ಸಿಎಂ ಮನವೊಲಿಸಿದ್ದಾರೆ. ಲೋಕಸಭಾ ಚುನಾವಣೆ ಕಳೆಯುವವರೆಗೆ ತಾಳ್ಮೆಯಿಂದ ಇರಿ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಸಿಎಂ ಮಾತಿಗೆ ಬೆಲೆ ಕೊಟ್ಟು ಶಾಸಕರು ಸುಮ್ಮನಾಗ್ತಾರಾ ಅಥವಾ ಮತ್ತೆ ರಾಜ್ಯದಲ್ಲಿ ಆಪರೇಷನ್ ಕಮಲದ ಅಸಲಿ ಆಟ ಶುರುವಾಗುತ್ತಾ ಎನ್ನುವ ಪ್ರಶ್ನೆ ಎದ್ದಿದ್ದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *