Connect with us

Latest

ಚೈತ್ರ ನವರಾತ್ರಿ ವ್ರತ – 9 ದಿನದಿಂದ ಉಪವಾಸವಿದ್ದುಕೊಂಡೇ ಮೋದಿ ಪ್ರಚಾರ!

Published

on

– 13 ರಾಜ್ಯ, 25 ಸಮಾವೇಶದಲ್ಲಿ ಭಾಗಿ
– ಒಂದು ಬಗೆಯ ಹಣ್ಣು ಮಾತ್ರ ಸೇವನೆ

ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಭರ್ಜರಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ಬರುವಂತೆ ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ರ್ಯಾಲಿ, ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ಮಧ್ಯೆ ಚೈತ್ರ ನವರಾತ್ರಿ ಬಂದಿದ್ದು, ಕಳೆದ 9 ದಿನಗಳಿಂದ ಮೋದಿ ಅವರು ಉಪವಾಸದಲ್ಲಿದ್ದುಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಹೌದು. ಕಳೆದ 9 ದಿನಗಳಿಂದ ಮೋದಿಯವರು ಉಪವಾಸವಿದ್ದುಕೊಂಡೇ ಸುಮಾರು 13 ರಾಜ್ಯಗಳಲ್ಲಿ 25ಕ್ಕೂ ಹೆಚ್ಚು ರ್ಯಾಲಿಗಳಲ್ಲಿ ಭಾಗಿಯಾಗಿದ್ದಾರೆ. ಪ್ರತಿದಿನ ಏನಿಲ್ಲ ಅಂದರೂ 1 ರಿಂದ 3 ರ್ಯಾಲಿಯಲ್ಲಿ ಮೋದಿ ಅವರು ಭಾಗಿಯಾಗುತ್ತಿದ್ದಾರೆ. ದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರಬೇಕು ಎಂದು ಶ್ರಮಿಸುತ್ತಿರುವ ಮೋದಿ ರ್ಯಾಲಿ, ಪ್ರಚಾರದ ಜೊತೆಗೆ ತಡ ರಾತ್ರಿಯವರೆಗೂ ಪಕ್ಷದ ಮುಖಂಡರೊಡನೆ ಸಭೆ, ಚರ್ಚೆಯನ್ನು ಮಾಡಿ, ಕೆಲವೇ ಗಂಟೆಗಳಷ್ಟೇ ನಿದ್ರೆ ಮಾಡುತ್ತಿದ್ದಾರೆ.

ಲೋಕಸಭಾ ಚುನಾವಣೆಯೂ ಒಟ್ಟು 7 ಹಂತದಲ್ಲಿ ನಡೆಯಲಿದ್ದು, ಮೋದಿಯವರು ಪಕ್ಷಕ್ಕಾಗಿ ದೇಶಾದ್ಯಂತ ಸುಮಾರು 150ಕ್ಕೂ ಹೆಚ್ಚು ರ್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಆದ್ರೆ ಮೊದಲನೇ ಹಾಗೂ ಎರಡನೇ ಹಂತದ ಚುನಾವಣೆ ವೇಳೆ ಚೈತ್ರ ನವರಾತ್ರಿ ಆರಂಭವಾಗಿದ್ದು, ಕಳೆದ 9 ದಿನಗಳಿಂದ ಮೋದಿಯವರು ಉಪವಾಸ ಮಾಡುತ್ತಿದ್ದಾರೆ. ಊಟವನ್ನು ಸೇವಿಸದೇ ಕೇವಲ ಹಣ್ಣು ಸೇವಿಸಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ.

ಚೈತ್ರ ನವರಾತ್ರಿ ಎಂದರೇನು?
ದಕ್ಷಿಣ ಭಾರತದಲ್ಲಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಶರನ್ನವರಾತ್ರಿ ಆಚರಿಸುವಂತೆ, ಉತ್ತರ ಭಾರತದಲ್ಲಿ ಚೈತ್ರ ನವರಾತ್ರಿಯನ್ನು ಆಚರಿಸುತ್ತಾರೆ. ಯುಗಾದಿ ಹಬ್ಬದ ದಿನದಿಂದ ಆರಂಭವಾಗುವ ಮುಂದಿನ 9 ದಿನಗಳನ್ನು ಚೈತ್ರ ನವರಾತ್ರಿ ಎಂದು ಆಚರಿಸುತ್ತಾರೆ. ಯುಗಾದಿಯ ದಿನದಿಂದ ಶ್ರೀರಾಮ ಜನಿಸಿದ ಚೈತ್ರ ಶುದ್ಧ ನವಮಿಯವರೆಗೂ ಚೈತ್ರ ನವರಾತ್ರಿಯನ್ನು ಆಚರಿಸುವುದು ವಾಡಿಕೆ. ಈ ಆಚರಣೆಯನ್ನು ರಾಮ ನವರಾತ್ರಿ ಎಂದು ಕರೆಯುತ್ತಾರೆ. ಶರನ್ನವರಾತ್ರಿಯಂತೆ ಚೈತ್ರ ನವರಾತ್ರಿಯಂದು ಪ್ರತಿದಿನ ಶಕ್ತಿ ದೇವತೆಗಳನ್ನು ಪೂಜಿಸಲಾಗುತ್ತದೆ.

ಮೋದಿ ಆಚರಿಸುವುದು ಹೇಗೆ?
ಈ ಬಾರಿ ಚೈತ್ರ ನವರಾತ್ರಿ ಏ.6ಕ್ಕೆ ಆರಂಭವಾಗಿದ್ದು, ಇಂದು(ಏ.14) ಮುಕ್ತಾಯವಾಗುತ್ತದೆ. ಸುಮಾರು 45 ವರ್ಷಗಳಿಂದ ಮೋದಿ ಅವರು ಈ ಚೈತ್ರ ನವರಾತ್ರಿಯ ಕಾಲದಲ್ಲಿ ಉಪವಾಸ ಮಾಡುವ ಸಂಪ್ರದಾಯವನ್ನು ಅನುಸರಿಸುತ್ತಾ ಬಂದಿದ್ದಾರೆ. ಈ ಆಚರಣೆಯನ್ನು ಅನುಸರಿಸುತ್ತ ಬಂದಿರುವ ಮೋದಿ ಅವರು ಈ ಸಂದರ್ಭದಲ್ಲಿ ವಿಶೇಷ ಧ್ಯಾನವನ್ನು ಮಾಡುವುದಿಲ್ಲ. ಅದರ ಬದಲಾಗಿ ಒಂದು ಹಣ್ಣನ್ನು ಆಯ್ಕೆ ಮಾಡಿಕೊಂಡು 9 ದಿನಗಳ ಕಾಲ ಆ ಹಣ್ಣನ್ನು ಮಾತ್ರ ಆಹಾರವನ್ನಾಗಿ ಸೇವಿಸುತ್ತಾರೆ. ಅದನ್ನು ಬಿಟ್ಟು ಬೇರೆ ಆಹಾರವನ್ನು ಸೇವಿಸುವುದಿಲ್ಲ.

ಹಾಗೆಯೇ ಶರನ್ನವರಾತ್ರಿ ಆಚರಣೆಯನ್ನೂ ಕೂಡ ಮೋದಿ ಅವರು ಮಾಡುತ್ತಾರೆ. ಈ ವೇಳೆ ಕೂಡ ಅವರು ಉಪವಾಸವನ್ನು ಮಾಡುತ್ತಾರೆ. ಈ ಸಮಯದಲ್ಲಿ ಕೇವಲ ನೀರು ಹಾಗೂ ಹಣ್ಣಿನ ರಸ ಬಿಟ್ಟರೇ ಬೇರೆ ಏನನ್ನು ಅವರು ಸೇವಿಸುವುದಿಲ್ಲ. ಅಲ್ಲದೇ ಈ ವೇಳೆಯಲ್ಲಿ ಕೆಲವು ಗಂಟೆಗಳ ಕಾಲ ಅವರು ಧ್ಯಾನ ಹಾಗೂ ದೇವರ ಆರಾಧನೆಯನ್ನು ಮಾಡುತ್ತಾರೆ.

ಒಟ್ಟು 51 ದಿನಗಳಲ್ಲಿ 150 ಮೋದಿ ಸಮಾವೇಶ ನಿಗದಿಯಾಗಿದೆ. ಬೇರೆ ರಾಜಕರಣಿಗಳಂತೆ ಪ್ರಧಾನಿ ಸಚಿವಾಲಯ ಸಂಪೂರ್ಣವಾಗಿ ಚುನಾವಣೆಯ ಸಮಯದಲ್ಲಿ ಸ್ಥಗಿತಗೊಳ್ಳುವುದಿಲ್ಲ. ಸಮಾವೇಶ ಮುಗಿಸಿ ದೆಹಲಿಗೆ ತೆರಳಿದ ಬಳಿಕ ರಾತ್ರಿಯೇ ಅಧಿಕಾರಿಗಳ ಜೊತೆ ಮಹತ್ವದ ವಿಚಾರದ ಬಗ್ಗೆ ಸಭೆ ನಡೆಸುತ್ತಾರೆ. ತಂದ ನಂತರ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಿ ನಿದ್ದೆಗೆ ಜಾರಿ ಮುಂಜಾನೆ ಬೇಗನೇ ಏಳುತ್ತಾರೆ.