Tuesday, 12th November 2019

Recent News

ಭೀಕರ ಬಸ್ ಅಪಘಾತಕ್ಕೆ 35 ಬಲಿ- ಕಂಬನಿ ಮಿಡಿದ ಮೋದಿ

ರಿಯಾದ್: ಸೌದಿಯಲ್ಲಿ ಬುಧವಾರ ಸಂಜೆ ನಡೆದ ಭೀಕರ ಬಸ್ ಅಪಘಾತಕ್ಕೆ 35 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, 4 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ವಿಚಾರ ತಿಳಿದು ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ.

ದುರಂತದ ಬಗ್ಗೆ ಟ್ವೀಟ್ ಮಾಡಿದ ಮೋದಿ ಅವರು, ಮೆಕ್ಕಾ ಬಳಿ ನಡೆದ ಬಸ್ ಅಪಘಾತದಿಂದ ದುಃಖಗೊಂಡಿದ್ದೇನೆ. ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಸಂತಾಪ ಸೂಚಿಸಲು ಬಯಸುತ್ತೇನೆ. ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದು ಸಂತಾಪ ಸೂಚಿಸಿದ್ದಾರೆ.

ಮದೀನದಿಂದ 170 ಕಿ.ಮೀ ದೂರದಲ್ಲಿರುವ ಅಲ್-ಅಖಾಲ್ ಗ್ರಾಮದ ಸಮೀಪ, ಹಿಜ್ರಾ ರಸ್ತೆಯಲ್ಲಿ ಈ ದುರಂತ ಸಂಭವಿಸಿತ್ತು. ಬುಧವಾರ ಸಂಜೆ 7 ಗಂಟೆ ಹೊತ್ತಿಗೆ 39 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಖಾಸಗಿ ಚಾರ್ಟರ್ಡ್ ಬಸ್ ಲೋಡರ್ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ 35 ಮಂದಿ ಸಾವನ್ನಪ್ಪಿದ್ದು, 4 ಮಂದಿ ಗಾಯಗೊಂಡಿದ್ದರು.

ಅಪಘಾತ ಸಂಭವಿಸಿದ ಬಳಿಕ ಸ್ಥಳೀಯರು ಗಾಯಾಳುಗಳನ್ನು ಅಲ್-ಹಮ್ನಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಸ್ಸಿನಲ್ಲಿ ಏಷ್ಯನ್ ಮತ್ತು ಅರಬ್ ವಲಸಿಗರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ಈವರೆಗೂ ಸಾವನ್ನಪ್ಪಿದ ಪ್ರಯಾಣಿಕರ ಗುರುತು ಪತ್ತೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಬಸ್ ಅಪಘಾತಗೊಂಡ ಬಳಿಕ ಅದು ಬೆಂಕಿ ಹೊತ್ತಿ ಉರಿಯುತ್ತಿರುವ ಫೋಟೋಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *