Connect with us

Latest

ಪಶ್ಚಿಮ ಬಂಗಾಳಕ್ಕೆ 1 ಸಾವಿರ ಕೋಟಿ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

Published

on

ನವದೆಹಲಿ: ಅಂಫಾನ್ ಚಂಡಮಾರುತಕ್ಕೆ ಸಿಲುಕಿರುವ ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿ 1 ಸಾವಿರ ಕೋಟಿ ರೂ.ಯನ್ನು ಮುಂಗಡ ಮಧ್ಯಂತರ ನೆರವು ಘೋಷಿಸಿದ್ದಾರೆ.

ಅಂಫಾನ್ ಹೊಡೆತಕ್ಕೆ ಸಿಲುಕಿರುವ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಪ್ರಧಾನಿಗಳು ನಡೆಸಿದ್ದರು. ಪ್ರಧಾನಿಗಳಿಗೆ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ರಾಜ್ಯಪಾಲ ಜಗದೀಪ್ ಧನ್‍ಖರ್ ಸಾಥ್ ನೀಡಿದರು. ಸರ್ವೆ ಬಳಿಕ ಮಾತನಾಡಿದ ಪ್ರಧಾನಿಗಳು, ಸೈಕ್ಲೋನ್ ಹೊಡೆತ ಸಿಲುಕಿರೋ ಪ್ರದೇಶಗಳ ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕಿದೆ. ಪಶ್ಚಿಮ ಬಂಗಾಳ ಎದುರಾಗಿರುವ ಎಲ್ಲ ಸವಾಲುಗಳನ್ನು ಎದುರಿಸಿ ಮುಂದೆ ಬರಬೇಕಿದೆ. ಇಂತಹ ಸಮಯದಲ್ಲಿ ಪಶ್ಚಿಮ ಬಂಗಾಳದ ಜೊತೆ ಕೇಂದ್ರ ಸರ್ಕಾರ ಇರಲಿದೆ. ಪಶ್ಚಿಮ ಬಂಗಾಳ ಮತ್ತೆ ಮೊದಲಿನಿಂತಾಗಲೂ ಎಲ್ಲರೂ ಜೊತೆಯಾಗಿ ಕೆಲಸ ಮಾಡೋಣ ಎಂದು ಹೇಳಿದ್ದಾರೆ.

ಅಂಫಾನ್ ಚಂಡಮಾರುತದ ಅಬ್ಬರಕ್ಕೆ ಪಶ್ಚಿಮ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ 72 ಮಂದಿ ಮೃತಪಟ್ಟಿದ್ದಾರೆ ವರದಿಯಾಗಿದೆ. ಮೃತಪಟ್ಟ 72 ಮಂದಿ ಪೈಕಿ 15 ಮಂದಿ ಕೋಲ್ಕತ್ತಾದಲ್ಲಿಯೇ ಸಾವನ್ನಪ್ಪಿದ್ದಾರೆ. ಇತರೆ ಐದು ಜಿಲ್ಲೆಗಳಲ್ಲಿ ಹೆಚ್ಚು ಸಾವು ಸಂಭವಿಸಿವೆ. ಅಂಫಾನ್ ಚಂಡಮಾರುತ ಸೃಷ್ಟಿಸಿರುವ ಅವಾಂತರಗಳಿಂದ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.