Connect with us

Latest

ಮೋದಿ-ಅಮಿತ್ ಶಾ ಕೃಷ್ಣಾರ್ಜುನ್ ಇದ್ದಂತೆ: ರಜನಿಕಾಂತ್

Published

on

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಕೃಷ್ಣ-ಅರ್ಜುನ ಇದ್ದಂತೆ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೊಗಳಿದ್ದಾರೆ.

ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಎರಡು ವರ್ಷಗಳ ಆಡಳಿತಾವಧಿಯ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಭಾನುವಾರ ಚೆನ್ನೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಜನಿಕಾಂತ್ ಅವರು, ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ಹಾಗೂ 35 (ಎ) ವಿಧಿಗಳನ್ನು ರದ್ದು ಮಾಡಿದ ಕೇಂದ್ರ ಎನ್‍ಡಿಎ ಸರ್ಕಾರದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಮಿಷನ್ ಕಾಶ್ಮೀರ ಕಾರ್ಯಾಚರಣೆಗಾಗಿ ಗೃಹ ಸಚಿವ ಅಮಿತ್ ಶಾ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನೀವು ಅದನ್ನು ನಡೆಸಿದ ರೀತಿ, ವಿಶೇಷವಾಗಿ ನೀವು ಸಂಸತ್ತಿನಲ್ಲಿ ಮಾಡಿದ ಭಾಷಣ ಅದ್ಭುತವಾಗಿತ್ತು. ನನಗೆ ಕೃಷ್ಣ-ಅರ್ಜುನ ಯಾರು ಅಂತ ಗೊತ್ತಿಲ್ಲ. ಮೋದಿ ಮತ್ತು ಅಮಿತ್ ಶಾ ಅವರಿಬ್ಬರು ಗೊತ್ತು. ಅಮಿತ್ ಶಾ ಜಿ ಮತ್ತು ನರೇಂದ್ರ ಮೋದಿ ಜಿ ಕೃಷ್ಣ-ಅರ್ಜುನರ ಜೋಡಿಯಂತೆ ಎಂದು ರಜನಿಕಾಂತ್ ಹೇಳಿದ್ದಾರೆ.

ಇದೇ ವೇಳೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಹೊಗಳಿದ ರಜನಿಕಾಂತ್, ನಾಯ್ಡು ಅವರು ಜನರ ಕಲ್ಯಾಣದಲ್ಲಿ ಆಸಕ್ತಿ ಹೊಂದಿರುವ ಸಂಪೂರ್ಣ ಆಧ್ಯಾತ್ಮಿಕ ವ್ಯಕ್ತಿ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ತಮಿಳುನಾಡು ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರ್ಸೆಲ್ವಂ ಇದ್ದರು.