Connect with us

Bellary

ಕಾಮಗಾರಿ ಮುಗಿದಿದೆ, ದಯವಿಟ್ಟು ಆಸ್ಪತ್ರೆ ಉದ್ಘಾಟಿಸಿ – ಡಿಕೆಶಿ, ತುಕರಾಂಗೆ ಕೈ ಮುಗಿದ ರೆಡ್ಡಿ

Published

on

ಬಳ್ಳಾರಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನನ್ನ ಕನಸಾಗಿತ್ತು. ಆ ಆಸ್ಪತ್ರೆ ಬಳ್ಳಾರಿಯಲ್ಲಿ ಮೂಲೆ ಗುಂಪಾಗಿದೆ. ಶಾಸಕ ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಸೇರಿ ಪ್ರತಿಭಟನೆ ಮಾಡಿ ಆಸ್ಪತ್ರೆ ಉದ್ಘಾಟನೆ ಮಾಡಬೇಕು. ದೊಡ್ಡ ಪ್ರಾಜೆಕ್ಟ್ ಹಾಳು ಮಾಡಿದ್ದಾರೆ. ಹೋರಾಟದಿಂದಲೇ ಈ ಸರ್ಕಾರದಲ್ಲಿ ಕೆಲಸ ಸಾಧಿಸಬೇಕು ಎಂದು ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

2 ವಾರಗಳ ಕಾಲ ಬಳ್ಳಾರಿಯಲ್ಲಿರುವ ರೆಡ್ಡಿ ಇಂದು ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತು ಆರಂಭಿಸಿದ ಅವರು, ಸರ್ವಜನಾಂಗದ ಶಾಂತಿಯ ತೋಟದಂತಿದೆ ಈ ವೇದಿಕೆ. ಕಾರಣ ಇಲ್ಲಿ ಮೂರು ಧರ್ಮದ ಜನರಿದ್ದಾರೆ. ಕೌಲ್ ಬಜಾರ್‍ನಲ್ಲಿ ಹತ್ತು ವರ್ಷದ ನಂತರ ಮೈಕ್ ಹಿಡಿದು ಮಾತನಾಡುತ್ತಿದ್ದೇನೆ. ಕೊನೆಯ ಉಸಿರೋವರೆಗೆ ನಮ್ಮ ಜೊತೆ ಇರೋದು ಕಣ್ಣುಗಳು ಮಾತ್ರ. ಈ ಶಿಬಿರ ಜನರಿಗೆ ಸಹಕಾರಿಯಾಗಲಿ. ಶಾಸಕ ನಾಗೇಂದ್ರ ನನ್ನ ತಮ್ಮ ಇದ್ದಂತೆ. ನನ್ನ ಮಾತು ಅವರು ಮೀರಲ್ಲ. ಇದು ಅವರ ಕ್ಷೇತ್ರವಾಗಿದೆ ಎಂದರು.

ಇಲ್ಲಿಯೇ ಹುಟ್ಟಿ ಬೆಳೆದಿದ್ದೇನೆ. ವೇದಿಕೆಯಲ್ಲಿ ಭಾವೋದ್ರಿಕ್ತದಿಂದ ಮಾತನಾಡಿದ್ದೇನೆ. ನಮ್ಮ ಅವಧಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಚಾಲನೆ ನೀಡಿದ್ದೆವು. ಸಿವಿಲ್ ವರ್ಕ್ ಮುಗಿದಿದೆ. ಆದರೂ ಆಸ್ಪತ್ರೆ ಉದ್ಘಾಟನೆ ಮಾಡುತ್ತಿಲ್ಲ. ಸಚಿವ ಡಿಕೆಶಿ ಮತ್ತು ಶಾಸಕ ತುಕಾರಾಂ ಅವರಿಗೆ ಕೈ ಮುಗಿಯುತ್ತೇನೆ. ಕೂಡಲೇ ಆಸ್ಪತ್ರೆ ಪ್ರಾರಂಭಿಸಿ. ಈ ರೀತಿಯಾದಾಗ ಬಹಳ ದುಃಖ ಆಗುತ್ತದೆ. ಆಸ್ಪತ್ರೆ ಉದ್ಘಾಟನೆ ಮಾಡಿ ಪುಣ್ಯಕಟ್ಟಿಕೊಳ್ಳಿ. ಇಲ್ಲಿದ್ದು ಹೋರಾಟ ಮಾಡೋಕೆ ನನಗೆ ಅವಕಾಶವಿಲ್ಲ ಎಂದು ಅವರು ಮನವಿ ಮಾಡಿಕೊಂಡರು.

ಆಸ್ಪತ್ರೆಗಾಗಿ ಶ್ರೀರಾಮುಲು, ಸೋಮಶೇಖರ್ ರೆಡ್ಡಿ, ನಾಗೇಂದ್ರ ಅವರಿಗೆ ಹೋರಾಟ ಮಾಡಲು ಹೇಳಿದ್ದೇನೆ. ಅಭಿವೃದ್ಧಿ ನಿರಂತರವಾಗಿ ನಡೆಯಬೇಕು. ಯಾರೇ ಅಧಿಕಾರದಲ್ಲಿ ಇರಲಿ. ರಾಜ್ಯ ಸರ್ಕಾರ ಆಸ್ಪತ್ರೆಗೆ ಉಪಕರಣಗಳನ್ನು ಕೊಟ್ಟರೆ ಆಸ್ಪತ್ರೆ ಓಪನ್ ಆಗುತ್ತದೆ. ಕುಡಿಯುವ ನೀರಿನ ಕೆಲಸ ತೊಂಬತ್ತರಷ್ಟು ಮುಗಿದಿದೆ. ಹತ್ತು ವರ್ಷದ ಹಿಂದೆ ಬಿಡುಗಡೆಯಾದ ಅಮೌಂಟ್ ನಲ್ಲಿ ಕೆಲಸ ನಡೆಯುತ್ತಿದೆ. ಜನರಿಗೆ ಒಳ್ಳೆಯ ಕೆಲಸ ಮಾಡಿ. ರಾಜಕೀಯ ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರದಲ್ಲಿ ಒಬ್ಬರೇ ಮುಂದುವರಿಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.